ಬೆಂಗಳೂರು: ಇಂದಿನಿಂದ ದೇಶದಲ್ಲಿ ಹೊಸ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಬ್ರಿಟಿಷ್ ಕಾಲದ ದಂಡಸಂಹಿತೆ ಕಾನೂನುಗಳ ಬದಲಾಗಿ ಹೊಸ ದೇಸೀಯ ಕ್ರಿಮಿನಲ್ ಕಾನೂನುಗಳನ್ನು ಜಾರಿಗೆ ತರಲಾಗಿದೆ.
ಆದರೆ ಇದೀಗ ವಿಚಾರಣೆ ಹಂತದಲ್ಲಿರುವ ಪ್ರಕರಣಗಳಿಗೆ ಈ ಹೊಸ ಕಾನೂನಿನ ಮಾನದಂಡಗಳು ಅನ್ವಯವಾಗುತ್ತದೆಯೇ ಎಂಬ ಅನುಮಾನ ಅನೇಕರಲ್ಲಿದೆ. ಅದರಲ್ಲೂ ವಿಶೇಷವಾಗಿ ರಾಜ್ಯದಲ್ಲಿ ನಡೆಯುತ್ತಿರುವ ಹೈ ಪ್ರೊಫೈಲ್ ಕೇಸ್ ಗಳಾದ ನಟ ದರ್ಶನ್ ಕೇಸ್, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಈ ಹೊಸ ಕಾನೂನುಗಳು ಅನ್ವಯವಾಗುತ್ತದೆಯೇ ಎಂಬ ಅನುಮಾನವಿದೆ.
ಇದಕ್ಕೆ ಇಂದು ಗೃಹ ಸಚಿವ ಜಿ ಪರಮೇಶ್ವರ್ ಸ್ಪಷ್ಟನೆ ನೀಡಿದ್ದಾರೆ. ಇದಕ್ಕೆ ಮೊದಲು ನಡೆದ ಪ್ರಕರಣಗಳ ವಿಚಾರಣೆ ಈ ಹಿಂದಿನ ಕಾನೂನು ರೀತಿಯಲ್ಲೇ ನಡೆಯಲಿದೆ. ಆದರೆ ಇಂದಿನಿಂದ ನಂತರ ದಾಖಲಾಗುವ ಪ್ರಕರಣಗಳ ವಿಚಾರಣೆ ಹೊಸ ಕಾನೂನಿನ್ವಯ ನಡೆಯಲಿದೆ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ. ಇದಕ್ಕೆ ಪೊಲೀಸರಿಗೆ ತರಬೇತಿ ನೀಡಲಾಗಿದೆ. ಮಾಹಿತಿಗಾಗಿ ಪ್ರತ್ಯೇಕ ಆಪ್ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಮಾಹಿತಿ ತಿಳಿದುಕೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಹೊಸ ಕಾನೂನಿನ ಅನ್ವಯ ಕೊಲೆ, ಲೈಂಗಿಕ ದೌರ್ಜನ್ಯ, ಹಲ್ಲೆ ಇತ್ಯಾದಿ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸಿ 60 ದಿನಗಳೊಳಗೆ ಆರೋಪ ಪಟ್ಟಿ ಸಲ್ಲಿಸಬೇಕು. 45 ದಿನಗಳೊಳಗೆ ಶಿಕ್ಷೆ ಘೋಷಣೆ ಮಾಡಬೇಕು. ಇದರಿಂದ ತ್ವರಿತವಾಗಿ ಕ್ರಿಮಿನಲ್ ಪ್ರಕರಣಗಳಲ್ಲಿ ಸಂತ್ರಸ್ತರಿಗೆ ನ್ಯಾಯ ಸಿಗಲಿದೆ. ಜೊತೆಗೆ ಕೊಲೆ, ಅಪಹರಣ, ಹಲ್ಲೆ, ಅತ್ಯಾಚಾರ ಇತ್ಯಾದಿಗಳ ದಂಡ ಸಂಹಿತೆ ಕೂಡಾ ಬದಲಾಗಿದೆ.
ಆದರೆ ಇವೆಲ್ಲವೂ ಇಂದಿನಿಂದ ದಾಖಲಾಗುವ ಪ್ರಕರಣಗಳಿಗೆ ಮಾತ್ರ ಸೀಮಿತವಾಗಲಿದೆ. ದರ್ಶನ್ ತೂಗುದೀಪ, ಪ್ರಜ್ವಲ್ ರೇವಣ್ಣ, ಸೂರಜ್ ರೇವಣ್ಣರ ಪ್ರಕರಣಗಳು ಈಗಾಗಲೇ ದಾಖಲಾಗಿದ್ದು, ವಿಚಾರಣೆ ಹಂತದಲ್ಲಿದೆ. ಈ ಪ್ರಕರಣಗಳಿಗೆ ಈ ಹೊಸ ಕಾಯಿದೆಗಳು ಅನ್ವಯವಾಗದು.