ಎರಡು ಗ್ರಾಮಗಳ ನಡುವೆ ತಂದಿಟ್ಟು ತಮಾಷೆ ನೋಡ್ತಿರೋ ಅಧ್ಯಕ್ಷ?
ಸೋಮವಾರ, 18 ಮಾರ್ಚ್ 2019 (13:32 IST)
ಅಣ್ಣ ತಮ್ಮಂದಿರಂತೆ ಇರುವ ಎರಡು ಗ್ರಾಮಗಳ ನಡುವೆ ಅಧ್ಯಕ್ಷನೊಬ್ಬ ಹುಳಿಹಿಂಡಿ ತಮಾಷೆ ನೋಡ್ತಿದ್ದು, ಆತನ ವಿರುದ್ಧ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.
ತುಮಕೂರು ಜಿಲ್ಲೆಯಲ್ಲಿ ವಿ ಎಸ್ ಎಸ್ ಸಂಘದ ಅಧ್ಯಕ್ಷನ ಗೂಂಡಾಗಿರಿಗೆ ಗ್ರಾಮಸ್ಥರು ಬೇಸತ್ತಿದ್ದಾರೆ. ಅಣ್ಣ-ತಮ್ಮಂದಿರಂತಿದ್ದ ಗ್ರಾಮಗಳ ನಡುವೆ ತಂದಿಕ್ಕಿ ತಮಾಷೆ ನೋಡುತ್ತಿರುವ ಅಧ್ಯಕ್ಷ ವಿಶ್ವನಾಥನ ವಿರುದ್ಧ ಜನರು ರೊಚ್ಚಿಗೆದ್ದಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಶಿಡ್ಲಕಟ್ಟೆ- ಬರಕನಹಾಳ್ ಎಂಬ ಹೆಸರಿದ್ದ ಸಂಘದ ಹೆಸರನ್ನು ವಿಶ್ವನಾಥ್ ಅಧ್ಯಕ್ಷನಾದ ಮೇಲೆ, ಆತ ಬರಕನಹಾಳ್ ಗ್ರಾಮದವನಾಗಿರುವುದರಿಂದ ಶಿಡ್ಲಕಟ್ಟೆ ಗ್ರಾಮದ ಹೆಸರು ಅಳಿಸಿ ದೌರ್ಜನ್ಯ ನಡೆಸಿದ್ದಾನೆ.
ಕೆಲ ದಿನಗಳ ಹಿಂದೆ ನಡೆದ ಗ್ರಾಮದೇವಿ ಶ್ರೀ ಕರಿಯಮ್ಮನ ಜಾತ್ರೆಯಲ್ಲಿಯೂ ತಗಾದೆ ತೆಗೆದು ಶಿಡ್ಲಕಟ್ಟೆ ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದ್ದ. ಪೂರ್ವಜರಿಂದಲೂ ಅಣ್ಣ- ತಮ್ಮಂದಿರಂತೆ ಬಾಳುತ್ತಿರುವ ಎರಡು ಗ್ರಾಮಗಳ ಗ್ರಾಮಸ್ಥರಿಗೆ ವಿಶ್ವನಾಥ್ ನ ಕ್ರಮ ತಲೆ ನೋವಿಗೆ ಕಾರಣವಾಗಿದೆ.
ವಿಶ್ವನಾಥನ ಈ ಕುತಂತ್ರ ರಾಜಕಾರಣದಿಂದ ಶಾಲಾ ಮಕ್ಕಳ ಮೇಲೆ ಪರಿಣಾಮ ಬೀರುತ್ತಿದೆ. ಶಾಲಾ ಮಕ್ಕಳು ಗ್ರಾಮಗಳ ಸಮಸ್ಯೆಯಿಂದ ಇಬ್ಭಾಗವಾಗುವ ಆತಂಕ ಎದುರಾಗಿದೆ. ವಿಶ್ವನಾಥನ ಗೂಂಡಾಗಿರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಶಿಡ್ಲಕಟ್ಟೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.