ಐಟಿ/ಬಿಟಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಸಮ್ಮುಖದಲ್ಲಿ ಪಾಲುದಾರಿಕೆ ಒಪ್ಪಂದಗಳಿಗೆ ಸಹಿ

ಶುಕ್ರವಾರ, 24 ಸೆಪ್ಟಂಬರ್ 2021 (20:53 IST)
ಬೆಂಗಳೂರು: ರಾಜ್ಯದಲ್ಲಿ ಹೊಸ ತಾಂತ್ರಿಕತೆಗಳ ಬೆಳವಣಿಗೆಯನ್ನು ಉತ್ತೇಜಿಸುವುದಕ್ಕಾಗಿ ರಾಜ್ಯ ಸರ್ಕಾರವು 100.52 ಕೋಟಿ ರೂಪಾಯಿಗಳ ಮೂರು ಪಾಲುದಾರಿಕೆ ಒಪ್ಪಂದಗಳಿಗೆ (ಎಂಒಎ- ಮೆಮೊರಾಂಡಮ್ ಆಫ್ ಅಸೋಸಿಯೇಷನ್) ಶುಕ್ರವಾರ ಸಹಿ ಹಾಕಿತು. 
 
ಭಾರತ ಸರ್ಕಾರದ ‘ಆಜಾದ್ ಕಾ ಅಮೃತ್ ಮಹೋತ್ಸವ’ ಅಭಿಯಾನಕ್ಕೆ ಪೂರಕವಾಗಿ ರಾಜ್ಯ ಸರ್ಕಾರವು ಉದ್ಯಮ ಮತ್ತು ಆಂತರಿಕ ವಾಣಿಜ್ಯ ಉತ್ತೇಜನಾ ಇಲಾಖೆ (ಡಿಪಿಐಐಟಿ) ಸಹಯೋಗದಲ್ಲಿ ಏರ್ಪಡಿಸಿದ್ದ ‘ಆವಿಷ್ಕಾರದಿಂದ ಆತ್ಮನಿರ್ಭರದವರೆಗು’ ಕಾರ್ಯಕ್ರಮದಲ್ಲಿ ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ಈ ಒಪ್ಪಂದಗಳು ಏರ್ಪಟ್ಟವು. 
 
ಈ ಒಪ್ಪಂದಗಳ ಪ್ರಕಾರ ಸ್ಥಾಪನೆಯಾಗುವ  ಕೇಂದ್ರಗಳು, ಸಂಶೋಧಕರು, ಶಿಕ್ಷಣ ತಜ್ಞರು, ನವೋದ್ಯಮಗಳು ಹಾಗೂ ಉದ್ಯಮಗಳ ಬೆಳವಣಿಗೆಗೆ ಸಹಕಾರಿಯಾಗುವಂತಹ ತಾಂತ್ರಿಕ ರೂಪುರೇಷೆ ಸಿದ್ಧಪಡಿಸಲು ನೆರವಾಗಲಿವೆ. ಕೃಷಿ, ಆರೋಗ್ಯಸೇವೆ, ಉತ್ಪಾದನೆ, ಸ್ಮಾರ್ಟ್ ಸಿಟೀಸ್ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಐಒಟಿ (ಇಂಟರ್ ನೆಟ್ ಆಫ್ ಥಿಂಗ್ಸ್)ಗಳ ಜವಾಬ್ದಾರಿಯುತ ಬಳಕೆಗೆ ಒತ್ತು ಕೊಡಲಿವೆ ಎಂದು ಸಚಿವರು ಅಭಿಪ್ರಾಯಪಟ್ಟರು. 
 
ಒಂದನೇ ಒಪ್ಪಂದವು, ಬೆಂಗಳೂರಿನಲ್ಲಿ ‘ಕ್ಷಮತೆ ಸಂವರ್ಧನೆಗಾಗಿ ಉತ್ಕೃಷ್ಠತಾ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದ್ದಾಗಿದೆ. ಇದಕ್ಕಾಗಿ ಸರ್ಕಾರದ ಎಲೆಕ್ಟ್ರಾನಿಕ್ಸ್, ಐಟಿ/ಬಿಟಿ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ಸ್ ಆಫ್ ಇಂಡಿಯಾ (ಎಸ್.ಟಿ.ಪಿ.ಐ) ಸಹಿ ಹಾಕಿವೆ. ಒಟ್ಟು 26.77 ಕೋಟಿ ರೂಪಾಯಿಗಳ ಯೋಜನೆ ಇದಾಗಿದ್ದು, ಇದರಲ್ಲಿ ಸರ್ಕಾರದ ಪಾಲು 17.60 ಕೋಟಿ ರೂಪಾಯಿಗಳಾಗಿರುತ್ತದೆ. ಇದರಡಿಯಲ್ಲಿ, ಕೃತಕ ಬುದ್ಧಿಮತ್ತೆ, ಮಷೀನ್ ಲರ್ನಿಂಗ್, ಬಿಗ್ ಡ್ಯಾಟಾ, ಐಒಟಿ ಯಂತಹ ಹೊಸ ತಾಂತ್ರಿಕತೆಗಳನ್ನು ಅಭಿವೃದ್ಧಿಪಡಿಸುವ ನವೋದ್ಯಮಗಳಿಗೆ (ಸ್ಟಾರ್ಟ್ ಅಪ್) ‘ಮೇಕ್ ಇನ್ ಇಂಡಿಯಾ’ ಮತ್ತು ‘ಡಿಜಿಟಲ್ ಇಂಡಿಯಾ’ವನ್ನು ಗಮನದಲ್ಲಿರಿಸಿಕೊಂಡು ಉತ್ಕೃಷ್ಠತಾ ಕೇಂದ್ರವು ಬೆಂಬಲ ನೀಡುತ್ತದೆ ಎಂದು ಅಶ್ವತ್ಥನಾರಾಯಣ ವಿವರಿಸಿದರು. 
 
ಎರಡನೇ ಒಪ್ಪಂದವು, ತ್ರಿಪಕ್ಷೀಯ ಒಪ್ಪಂದವಾಗಿದ್ದು, ಐಟಿ/ಬಿಟಿ ಇಲಾಖೆಯ ಕರ್ನಾಟಕ ನಾವೀನ್ಯತಾ ಮತ್ತು ತಂತ್ರಜ್ಞಾನ ಸಂಸ್ಥೆ (ಕಿಟ್ಸ್), ಐ-ಹಬ್ ಎ.ಆರ್.ಟಿ. ಪಾರ್ಕ್ (ಕೃತಕ ಬುದ್ಧಿಮತ್ತೆ ಮತ್ತು ರೊಬೋಟಿಕ್ಸ್ ತಾಂತ್ರಿಕತೆಗಳು) ಹಾಗೂ ಭಾರತೀಯ ವಿಜ್ಞಾನ ಸಂಸ್ಥೆ (ಐ.ಐ.ಎಸ್.ಸಿ.) ನಡುವೆ ಏರ್ಪಟ್ಟಿದೆ. 60 ಕೋಟಿ ರೂಪಾಯಿಗಳ ಯೋಜನೆ ಇದಾಗಿದೆ. ಮುಂದಿನ ತಲೆಮಾರಿನ ಕೃತಕ ಬುದ್ಧಿಮತ್ತೆ, ರೊಬೋಟಿಕ್ಸ್ ಮತ್ತು ಸುಧಾರಿತ 5ಜಿ ಸಂವಹನ ತಾಂತ್ರಿಕತೆಗಳನ್ನು ರೂಪಿಸುವಂತಹ ತಾಂತ್ರಿಕ-ಉದ್ಯಮಶೀಲತೆಯನ್ನು ಉತ್ತೇಜಿಸುವುದಕ್ಕಾಗಿ ಉತ್ಕೃಷ್ಠತಾ ಕೇಂದ್ರ ಸ್ಥಾಪಿಸುವುದು ಇದರ ಉದ್ದೇಶ ಎಂದರು. 
 
ಮೂರನೆಯದು, ಬೆಂಗಳೂರಿನಲ್ಲಿ ‘ಸೆಂಟರ್ ಫಾರ್ ಇಂಟರ್ ನೆಟ್ ಆಫ್ ಎಥಿಕಲ್ ಥಿಂಗ್ಸ್’ (CIET) ಸ್ಥಾಪನೆಗೆ ಸಂಬಂಧಪಟ್ಟಿದೆ. ಒಟ್ಟು  22.92 ಕೋಟಿ ರೂಪಾಯಿಗಳ ಈ ಯೋಜನೆಗಾಗಿ ‘ಕಿಟ್ಸ್’, ಐಐಐಟಿ-ಬಿ ಬೆಂಗಳೂರು ಮತ್ತು ವರ್ಲ್ಡ್ ಎಕನಾಮಿಕ್ ಫೋರಂ (ಡಬ್ಲ್ಯುಇಎಫ್) ನಡುವೆ ಪಾಲುದಾರಿಕೆ ಒಪ್ಪಂದ ಏರ್ಪಟ್ಟಿದೆ. 
 
‘ಅಮೃತ್ ಸ್ಟಾರ್ಟ್ ಅಪ್’ ಉಪಕ್ರಮದಡಿ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿ/ ಪಂಗಡ ಮತ್ತು ಅಲ್ಪಸಂಖ್ಯಾತರು ಸ್ಥಾಪಕರಾಗಿರುವ 75 ನವೋದ್ಯಮಗಳಿಗೆ ‘ಎಲಿವೇಟ್ ಉನ್ನತಿ’ ಕಾರ್ಯಕ್ರಮದಡಿ ಬೆಂಬಲ ನೀಡುವುದಾಗಿಯೂ ಇದೇ ಸಂದರ್ಭದಲ್ಲಿ ಪ್ರಕಟಿಸಲಾಯಿತು. 
 
ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಐಐಐಟಿ-ಬಿ ಯ ಡಾ.ಮಾಧವ್, ಪ್ರೊ.ಸಡಗೋಪನ್, 1ಬ್ರಿಜ್ ಸಿಇಒ ಮೋಹನ್ ಪದಕಿ, ಡಾ.ಲಕ್ಷ್ಮಿ ಜಗನ್ನಾಥನ್, ವರ್ಲ್ಡ್ ಎಕನಾಮಿಕ್ ಫೋರಂನ ಪುರುಷೋತ್ತಮ ಕೌಶಿಕ್ ಮತ್ತಿತರರು ಪಾಲ್ಗೊಂಡಿದ್ದರು. 
 
ಐಟಿ/ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ರಾಜ್ಯ ನವೋದ್ಯಮ ದೂರದರ್ಶಿತ್ವ ಮಂಡಳಿಯ ಅಧ್ಯಕ್ಷ ಪ್ರಶಾಂತ್ ಪ್ರಕಾಶ್, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಧ್ಯಕ್ಷ  ಬಿ.ವಿ.ನಾಯ್ಡು, ಕಿಟ್ಸ್ ವ್ಯವಸ್ಥಾಪಕ ನಿರ್ದೇಶಕಿ ಡಾ.ಮೀನಾ ನಾಗರಾಜ್ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.
pothis

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ