ಶಾಸಕ ಜಮೀರ್ ಅಹಮದ್ ಖಾನ್ಗೆ ಐಟಿ ಶಾಕ್: ಏಕಕಾಲಕ್ಕೆ ವಿವಿಧೆಡೆ ದಾಳಿ!

ಗುರುವಾರ, 5 ಆಗಸ್ಟ್ 2021 (09:24 IST)
ಬೆಂಗಳೂರು(ಆ.05): ಕಾಂಗ್ರೆಸ್ ನಾಯಕ, ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ಗೆ ಗುರುವಾರ ಬೆಳ್ಳಂ ಬೆಳಗ್ಗೆ ಐಟಿ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ವಿವಿಧ ತಂಡಗಳಲ್ಲಿ ಐಟಿ ಅಧಿಕಾರಿಗಳು ವಿವಿಧ ಕಡೆ ದಾಳಿ ನಡೆಸಿದ್ದಾರೆ. ಸ್ಥಳೀಯ ಪೊಲೀಸ್ ಹಾಗೂ ಸಿಆರ್ಪಿಎಫ್ ಪಡೆ ಭದ್ರತೆ ಜೊತೆ ಈ ದಾಳಿ ನಡೆದಿದೆ.

* ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ಖಾನ್ಗೆ ಐಟಿ ಶಾಕ್
* ಬೆಳ್ಳಂ ಬೆಳಿಗ್ಗೆ ಜಮೀರ್ ಖಾನ್ ಮನೆ ಮೇಲೆ ಐಟಿ ಅಧಿಕಾರಿಗಳ ದಾಳಿ
* ಮನೆ, ಕಚೇರಿ, ಪ್ಲ್ಯಾಟ್ ಹಾಗೂ ನ್ಯಾಷನಲ್ ಟ್ರಾವೆಲ್ಸ್ ಕಚೇರಿಯ ಮೇಲೂ ದಾಳಿ
ಬೆಳಗ್ಗೆ 6 ಗಂಟೆಗೆ ಜಮೀರ್ ಅಹಮದ್ ಖಾನ್ರವರ ಕಂಟೋನ್ಮೆಂಟ್ ಬಳಿ ಇರುವ ಮನೆ ಸೇರಿ ಕಚೇರಿ, ಪ್ಲ್ಯಾಟ್ ಹಾಗೂ ನ್ಯಾಷನಲ್ ಟ್ರಾವೆಲ್ಸ್ ಕಚೇರಿಯ ಮೇಲೆ ಏಕಕಾಲಕ್ಕೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಳೆದ ಎರಡೂವರೆ ತಾಸಿನಿಂದ ದಾಖಲೆಗಳ ಶೋಧ ಕಾರ್ಯ ನಡೆಯುತ್ತಿದೆ. ಆದಾಯಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಯುತ್ತಿದೆ.
ಜಮೀರ್ ಅಹಮದ್ರವರು ಕಳೆದ ಮೂರು ವರ್ಷದ ಅವಧಿಯಲ್ಲಿ ನೂರು ಕೋಟಿಗೂ ಅಧಿಕ ವ್ಯವಹಾರ ನಡೆಸಿದ್ದು, ಅದರಲ್ಲಿ ಸುಮಾರು ಶೇ. 30ರಷ್ಟು ತೆರಿಗೆ ಕಟ್ಟಿಲ್ಲ, ತೆರಿಗೆ ವಂಚನೆ ನಡೆಸಿದ್ದಾರೆಂಬ ಆರೋಪ ಪ್ರಮುಖವಾಗಿ ಕೇಳಿ ಬಂದಿದೆ. ಈ ಹಿಂದೆ ಕೇಳಿ ಬಂದಿದ್ದ ಐಎಂಎ ಹಗರಣ ವಿಚಾರದಲ್ಲೂ ಜಮೀರ್ರನ್ನು ಐಟಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು.
ಅರಮನೆಯಂತಿದೆ ಜಮೀರ್ ನಿವಾಸ
ಜಮೀರ್ ಅಹಮದ್ ಖಾನ್ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅರೇಬಿಕ್ ಶೈಲಿಯಲ್ಲಿ ಐಷಾರಾಮಿ ಮನೆ ಕಟ್ಟಿಸಿದ್ದರು. ಅರಮನೆಯನ್ನೂ ನಾಚಿಸುವಂತಹ ಮನೆ ಇದಾಗಿತ್ತು. ಹೀಗಿರುವಾಗ ಜಮೀರ್ ‘ಅರಮನೆ’ ಕಟ್ಟಿಸಿದಾಗಲೇ ಐಟಿ ಕಣ್ಣು ಅವರ ಮೇಲಿತ್ತಾ ಎಂಬ ಅನುಮಾನ ಎದ್ದಿದೆ. ಯಾಕೆಂದರೆ ಐಟಿ ದಾಳಿಗೂ ಮುನ್ನ ಕನಿಷ್ಟ ಮೂರರಿಂದ ಆರು ತಿಂಗಳ ಕಾಲ ಸಮೀಕ್ಷೆ ನಡೆಸಲಾಗುತ್ತದೆ. ಎಲ್ಲಾ ಬಗೆಯ ಖರ್ಚು, ಹಣದ ಮೂಲದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತದೆ. ಬಳಿಕವಷ್ಟೇ ಇಂತಹ ದಾಳಿ ನಡೆಯುತ್ತದೆ ಎಂಬುವುದು ಉಲ್ಲೇಖನೀಯ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ