ರಾಷ್ಟ್ರಪತಿ ಜತೆ ಫೋಟೊ ಸೆಷನ್ ಗೆ ಜೆಡಿಎಸ್ ಬಹಿಷ್ಕರಿಸಿದ್ದೇಕೆ ಗೊತ್ತಾ…?

ಬುಧವಾರ, 25 ಅಕ್ಟೋಬರ್ 2017 (16:54 IST)
ಬೆಂಗಳೂರು: ವಿಧಾನಸೌಧ ವಜ್ರ ಮಹೋತ್ಸವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಜತೆ ಶಾಸಕರ ಗ್ರೂಪ್ ಫೋಟೊ ಸೆಷನ್ ನ್ನು ಜೆಡಿಎಸ್ ಬಹಿಷ್ಕರಿಸಿದೆ.

ವಿಧಾನಸೌಧದ ವಜ್ರಮಹೋತ್ಸವದ ಪ್ರಯುಕ್ತ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಿದರು. ಬಳಿಕ ವಿಧಾನಸೌಧದ ಬಳಿ ಇರುವ ಗಾಂಧಿ ಪ್ರತಿಮೆ ಎದುರು ಉಭಯ ಸದನಗಳ 300 ಮಂದಿ ಶಾಸಕರ ಜೊತೆ ಫೋಟೊ ತೆಗೆಸಿಕೊಳ್ಳುವ ಕಾರ್ಯಕ್ರಮ ನಿಗದಿಯಾಗಿತ್ತು. ರಾಷ್ಟ್ರಪತಿ ವಿಧಾನಸೌಧ ವೀಕ್ಷಿಸಿ ಗಾಂಧಿ ಪ್ರತಿಮೆ ಬಳಿ ಬರುವುದಕ್ಕೂ ಮೊದಲೇ ಬಹುತೇಕ ಶಾಸಕರು ಮುಂಚಿತವಾಗಿಯೇ ಆಗಮಿಸಿದ್ದರು.

ಜೆಡಿಎಸ್ ಶಾಸಕರು ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಸ್ಥಳಕ್ಕಾಗಮಿಸಿದರಾದರೂ ಅಲ್ಲಿ ಸರಿಯಾದ ಶಿಷ್ಟಾಚಾರ ಪಾಲನೆಯಾಗಿರಲಿಲ್ಲ ಎಂಬ ಆರೋಪ ಕೇಳಿ ಬಂತು. ಜಗದೀಶ್ ಶೆಟ್ಟರ್ ಗೆ ಮೊದಲ ಸಾಲಿನಲ್ಲಿ ಕುರ್ಚಿ ಹಾಕಲಾಗಿತ್ತು. ಅದೇ ರೀತಿ ಜೆಡಿಎಸ್‍ನ ಶಾಸಕಾಂಗ ಪಕ್ಷದ ನಾಯಕರಾದ ಕುಮಾರಸ್ವಾಮಿ ಅವರಿಗೆ ಕುರ್ಚಿ ಹಾಕಬೇಕಾಗಿತ್ತಾದರೂ ಶಿಷ್ಟಾಚಾರ ಪಾಲನೆಯಾಗಿರಲಿಲ್ಲ.

ಇತ್ತೀಚೆಗಷ್ಟೇ ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಕುಮಾರಸ್ವಾಮಿ ಬಂದಾಗ ಕುಳಿತುಕೊಳ್ಳಲು ಕುರ್ಚಿ ಇರಲಿಲ್ಲ. ಜೆಡಿಎಸ್‍ನ ಹಿರಿಯ ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿಗೂ ಕುರ್ಚಿ ಇರಲಿಲ್ಲ. ಇದರಿಂದ ಸಿಟ್ಟಾದ ಜೆಡಿಎಸ್ ಶಾಸಕರು ಫೋಟೊ ಸೆಷನ್ ಬಹಿಷ್ಕರಿಸುವಂತೆ ಕುಮಾರಸ್ವಾಮಿ ಅವರ ಮೇಲೆ ಒತ್ತಡ ಹೇರಿದರು. ಶಾಸಕರ ಒತ್ತಡಕ್ಕೆ ಮಣಿದ ಕುಮಾರಸ್ವಾಮಿ ಅಲ್ಲಿಂದ ನಿರ್ಗಮಿಸಿದರು.

ಇದೇವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್‌ಡಿಕೆ, ರಾಜ್ಯದ ಜನತೆ ಸಂಕಷ್ಟದಲ್ಲಿದ್ದಾರೆ. ರೈತರು ತೊಂದರೆಯಲ್ಲಿದ್ದಾರೆ. ಇಂತಹ ಕಾರ್ಯಕ್ರಮಗಳಿಗೆ ಅದ್ಧೂರಿ ವೆಚ್ಚ ಬೇಕಿರಲಿಲ್ಲ. ಈ ಹಿನ್ನೆಲೆಯಲ್ಲಿ ವಜ್ರಮಹೋತ್ಸವದಲ್ಲಿ ಏರ್ಪಡಿಸಿರುವ ಭೋಜನಕೂಟದಲ್ಲಿ ಭಾಗವಹಿಸುವುದಿಲ್ಲ ಮತ್ತು ಫೋಟೊ ತೆಗೆಸಿಕೊಳ್ಳುವುದರಲ್ಲೂ ನನಗೆ ಆಸಕ್ತಿ ಇರಲಿಲ್ಲ. ಹೀಗಾಗಿ ನಿರ್ಗಮಿಸುತ್ತಿದ್ದೇವೆ ಎಂದು ಹೇಳಿದರು. 

ಬಸವರಾಜ ಹೊರಟ್ಟಿ ಮಾತನಾಡಿ, ಕಾರ್ಯಕ್ರಮ ಮಾಡಿದವರಿಗೆ ಕನಿಷ್ಠ ಪ್ರಮಾಣದ ಶಿಷ್ಟಾಚಾರ ಗೊತ್ತಿಲ್ಲ. ಜಗದೀಶ್‍ಶೆಟ್ಟರ್ ಗೆ ಕುರ್ಚಿ ಹಾಕಿದ ಮೇಲೆ ಕುಮಾರಸ್ವಾಮಿ ಅವರಿಗೂ ಒಂದು ಕುರ್ಚಿ ಹಾಕಬೇಕಿತ್ತು. ಹಿರಿಯ ನಾಯಕರನ್ನು ಕಡೆಗಣಿಸಲಾಗಿದೆ. ಹೀಗಾಗಿ ಫೋಟೊ ಸೆಷನ್‍ನಲ್ಲಿ ತಾವು ಭಾಗವಹಿಸುತ್ತಿಲ್ಲ. ಉಭಯ ಸದನಗಳ ಅಧ್ಯಕ್ಷರ ನಡವಳಿಕೆಯಿಂದ ನಮಗೆ ಅಸಮಾಧಾನವಾಗಿದೆ. ಹೀಗಾಗಿ ನಾವು ಕಾರ್ಯಕ್ರಮದಿಂದ ನಿರ್ಗಮಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ