ಚಿತ್ರದುರ್ಗದಲ್ಲೂ ಜಿಟಿಟಿಸಿ ಉದ್ಘಾಟನೆ

ಶನಿವಾರ, 18 ಸೆಪ್ಟಂಬರ್ 2021 (20:13 IST)
ಚಳ್ಳಕೆರೆ: ಉನ್ನತ ಶಿಕ್ಷಣ, ಕೌಶಲ್ಯಾಭಿವೃದ್ಧಿ ಖಾತೆ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರ ದೂರದೃಷ್ಟಿ ಫಲವಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ ಅತ್ಯಾಧುನಿಕವಾಗಿ ನಿರ್ಮಾಣವಾಗಿರುವ ಎಂಜಿನಿಯರಿಂಗ್ ಕಾಲೇಜು ಹಾಗೂ ಸರಕಾರಿ ಉಪಕರಣಾಗಾರ & ತರಬೇತಿ ಕೇಂದ್ರ (GTTC)ವನ್ನು ಶನಿವಾರ ಲೋಕಾರ್ಪಣೆ ಮಾಡಲಾಯಿತು. 
 
ಜತೆಗೆ, ಚಿತ್ರದುರ್ಗದ ಕಂಚಿಗನಾಳು ಗ್ರಾಮದಲ್ಲಿ 9.98 ಕೋಟಿ ರೂ. ನಿರ್ಮಿಸಲಾಗಿರುವ ನೂತನ ಜಿಟಿಟಿಸಿ ಕಟ್ಟಡವನ್ನೂ ಇಂದೇ ಉದ್ಘಾಟನೆ ಮಾಡಲಾಯಿತು.
 
62.80 ಕೋಟಿ ರೂ. ವೆಚ್ಚದಲ್ಲಿ ತಾಂತ್ರಿಕ ಮಹಾ ವಿದ್ಯಾಲಯವನ್ನು ಸುಸಜ್ಜಿತವಾಗಿ ನಿರ್ಮಿಸಲಾಗಿದ್ದು, ಈ ವರ್ಷದಿಂದಲೇ ಕಾರ್ಯಾರಂಭ ಮಾಡಲಾಗುವುದು. ಆರಂಭದಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ (ಕೃತಕ ಬುದ್ಧಿಮತ್ತೆ) & ಮಷಿನ್ ಲರ್ನಿಂಗ್ ಹಾಗೂ ಆಟೋಮೊಬೈಲ್ ಎಂಜಿನಿಯರಿಂಗ್ ಕೋರ್ಸ್ʼಗಳನ್ನು ಬೋಧಿಸಲಾಗುವುದು. ಈ ಎರಡೂ ಕೋರ್ಸುಗಳಿಗೆ 21ನೇ ಶತಮಾನದಲ್ಲಿ ಅಪಾರ ಬೇಡಿಕೆ ಇದೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದರು. 
 
ಹಾಗೆಯೇ, 25.64 ಕೋಟಿ ರೂ. ವೆಚ್ಚದಲ್ಲಿ ಜಿಟಿಟಿಸಿ ಕಟ್ಟಡ ವನ್ನು ನಿರ್ಮಾಣ ಮಾಡಲಾಗಿದೆ. ಇಲ್ಲಿ ಮೊದಲ ವರ್ಷ ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಹಾಗೂ ಡಿಪ್ಲೊಮಾ ಇನ್ ಮೆಕ್ಯಾಟ್ರಾನಿಕ್ಸ್ ಕೋರ್ಸುಗಳು ಇರುತ್ತವೆ. ಮೂರು ವರ್ಷದ ಕಲಿಕೆ, ಒಂದು ವರ್ಷದ ಕೈಗಾರಿಕಾ ಇಂಟರ್ನಶಿಪ್ ಇರುತ್ತದೆ, ಈ ಇಂಟರ್ನಶಿಫ್ ವೇಳೆ 10ರಿಂದ 15  ಸಾವಿರ ವೇತನವೂ ಸಿಗುತ್ತದೆ ಎಂದು ಸಚಿವರು ಮಾಹಿತಿ ನೀಡಿದರು. 
 
ಆಟೋಮೊಬೈಲ್‌ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಭಾರೀ ಬದಲಾವಣೆ ಆಗುತ್ತಿದ್ದು, ಇದಕ್ಕೆ ಪೂರಕವಾಗಿ ಕೇಂದ್ರ ಸರಕಾರ ಉತ್ಪಾದನಾ ಪೂರಕ ಪ್ರೋತ್ಸಾಹಕ ಯೋಜನೆ ಅಡಿಯಲ್ಲಿ 26,000 ಕೋಟಿ ರೂ. ನೆರವು ನೀಡುತ್ತಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ತಾಂತ್ರಿಕ ಶಿಕ್ಷಣ ಭಾರೀ ಒತ್ತು ಸಿಗುತ್ತಿದೆ ಎಂದು ಸಚಿವರು ಹೇಳಿದರು. 
 
ಭವಿಷ್ಯದಲ್ಲಿ ಇಂಧನದಿಂದ ನಡೆಯುವ ವಾಹನಗಳು ಮರೆಯಾಗಿ ವಿದ್ಯುತ್‌ ಚಾಲಿತ ವಾಹನಗಳು ರಸ್ತೆಗಿಳಿಯುತ್ತವೆ. ಎಲೆಕ್ಟ್ರಿಕ್‌ ಬ್ಯಾಟರಿ, ವಾಹನದ ಬಿಡಿಭಾಗ ತಯಾರಿಕೆ ಕ್ಷೇತ್ರದಲ್ಲಿ ಅಪಾರ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.
 
 
ಆರಂಭಕ್ಕೆ ಮೊದಲೇ ಸೀಟು ಭರ್ತಿ: 
 
ಇಲ್ಲಿ ಈ ವರ್ಷದಿಂದಲೇ ಎರಡೂ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ನಡೆಯಲಿದೆ ಎಂದ ಸಚಿವರು, ಚಳ್ಳಕೆರೆ ಜಿಟಿಟಿಸಿಯಲ್ಲಿ 120 ಸೀಟುಗಳಿದ್ದು, 116 ಸೀಟುಗಳು ಭರ್ತಿಯಾಗಿವೆ ಎಂದು ನುಡಿದರು. 
 
ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ತಾಂತ್ರಿಕ ಶಿಕ್ಷಣ ನೀಡಬೇಕೆನ್ನುವ ಏಕೈಕ ಉದ್ದೇಶದಿಂದ ಜಾಗತಿಕ ಗುಣಮಟ್ಟಕ್ಕೆ ಒತ್ತು ನೀಡಲಾಗುತ್ತಿದೆ. ಚಳ್ಳಕೆರೆಯಲ್ಲಿ ಇಂದು ಆರಂಭವಾಗಿರುವ ಸಂಸ್ಥೆಗಳು ಸಾಮಾನು ಸಂಸ್ಥೆಗಳಲ್ಲ. ಇಲ್ಲಿ ಓದಿದವರಿಗೆ ಕೆಲಸ ಗ್ಯಾರಂಟಿ ಎಂದು ಅವರು ಹೇಳಿದರು.
 
 
ಉಳಿದಂತೆ, ಇಲ್ಲಿನ ಜಿಟಿಟಿಸಿಯಲ್ಲಿ ೪೫೦ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಅಲ್ಪಾವಧಿ ತರಬೇತಿ ನೀಡುವ ಅವಕಾಶ ಇದೆ. ಈ ವಿಭಾಗದಲ್ಲಿ ತರಬೇತಿ ಪಡೆದರೂ ತಪ್ಪದೇ ಕೆಲಸ ಸಿಗುತ್ತದೆ. ಹೀಗಾಗಿ ಇಂಥ ಸಂಸ್ಥೆಗಳನ್ನು ಹೆಚ್ಚು ಹೆಚ್ಚಾಗಿ ಸ್ಥಾಪಿಸುವ ಉದ್ದೇಶ ಸರಕಾರದ್ದು ಎಂದು ಡಾ.ಅಶ್ವತ್ಥನಾರಾಯಣ ನುಡಿದರು. 
 
ಸಚಿವರ ಬಗ್ಗೆ ಶ್ಲಾಘನೆ 
 
ಕೌಶಲ್ಯ ಮತ್ತು ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ ಅವರು ತರುತ್ತಿರುವ ಸುಧಾರಣೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಹಾಗೂ ಕೇಂದ್ರ ಸಾಮಾಜಿಕ ನ್ಯಾಯ & ಸಾಮಾಜಿಕ ಸಬಲೀಕರಣ ಖಾತೆ ಸಚಿವ ನಾರಾಯಣಸ್ವಾಮಿ ಅವರು ಮುಕ್ತಕಂಠದಿಂದ ಶ್ಲಾಘಿಸಿದರು. ಕೋವಿಡ್ ಸಂದರ್ಭದಲ್ಲಿಯೂ ಒಳ್ಳೆಯ ಕೆಲಸ ಮಾಡುತ್ತಿದ್ದಾರೆಂದು ನುಡಿದರು.
 
 
ಚಳ್ಳಕೆರೆಯಲ್ಲಿ ಹಬ್ಬದ ವಾತಾವರಣ: 
 
ತಾಂತ್ರಿಕ ಮಹಾವಿದ್ಯಾಲಯ ಹಾಗೂ ಜಿಟಿಟಿಸಿ ಉದ್ಘಾಟನೆ ವೇಳೆ ಇಡೀ ಚಳ್ಳಕೆರೆ ಪಟ್ಟಣದಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಸಚಿವರಾದ ಡಾ.ಅಶ್ವತ್ಥನಾರಾಯಣ, ಶ್ರೀರಾಮಮುಲು, ಕೇಂದ್ರ ಸಚಿವ ನಾರಾಯಣ ಸ್ವಾಮಿ ಅವರನ್ನು ಬೃಹತ್ ಸೇಬಿನ ಹಾರ ಹಾಕುವುದರ ಮೂಲಕ ಪಟ್ಟಣದ ಜನರು ಬರ ಮಾಡಿಕೊಂಡರು. ಅಲ್ಲದೆ, ಅವರ ಮೇಲೆ ಪುಷ್ಪವೃಷ್ಟಿ ಮಾಡಿದರು. 
 
ಈ ಸಂದರ್ಭದಲ್ಲಿ ಚಳ್ಳಕೆರೆ ಶಾಸಕ ರಘುಮೂರ್ತಿ, ಹಿರಿಯೂರು ಶಾಸಕಿ ಪೂರ್ಣಿಮಾ, ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ವೈ.ಎ.ನಾರಾಯಣಸ್ವಾಮಿ, ಚಿದಾನಂದ, ಜಿಟಿಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಘವೇಂದ್ರ ಸೇರಿದಂತೆ ಅನೇಕ ಗಣ್ಯರು ಇದ್ದರು.
 
**
ಕಂಚಿಗನಾಳು ಜಿಟಿಟಿಸಿ ಕೂಡ ಆರಂಭ
 
ಚಿತ್ರದುರ್ಗದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಕಂಚಿಗನಾಳು ಗ್ರಾಮದ ಜಿಟಿಟಿಸಿಯಲ್ಲೂ ಈ ವರ್ಷವೇ ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ನೀಡಲಾಗುತ್ತಿದ್ದು, ಮೊದಲ ವರ್ಷದಲ್ಲಿ ವರ್ಷ ಡಿಪ್ಲೊಮಾ ಇನ್ ಟೂಲ್ ಅಂಡ್ ಡೈ ಮೇಕಿಂಗ್ ಹಾಗೂ ಡಿಪ್ಲೊಮಾ ಇನ್ ಮೆಕ್ಯಾಟ್ರಾನಿಕ್ಸ್ ಕೋರ್ಸುಗಳು ಇರುತ್ತವೆ ಎಂದು ಸಚಿವ ಡಾ.ಅಶ್ವತ್ಥನಾರಾಯಣ ಹೇಳಿದರು.
 
 
ಸಮಾಜದಲ್ಲಿ ವೈಟ್ ಕಾಲರ್ ಜಾಬ್ಗಳಂತೆ ಬ್ಲೂ ಕಾಲರ್ ಉದ್ಯೋಗಗಳು ಕೂಡ ಬಹಳ ಮುಖ್ಯ. ಈ ನಿಟ್ಟಿನಲ್ಲಿ ಜಿಟಿಟಿಸಿಗಳಲ್ಲಿ ಅತ್ಯುತ್ತಮ ಕುಶಲತೆಯುಳ್ಳ ಬ್ಲೂ ಕಾಲರ್ ಮಾನವ ಸಂಪನ್ಮೂಲವನ್ನು ತಯಾರು ಮಾಡಲಾಗುವುದು ಎಂದು ಅವರು ವಿವರಿಸಿದರು.
 
 
ಈ ಜಿಟಿಟಿಸಿಯನ್ನು ಕೇಂದ್ರ ಸಚಿವರಾದ ನಾರಾಯಣ ಸ್ವಾಮಿ ಅವರು ಲೋಕಾರ್ಪಣೆ ಮಾಡಿದರು. ಚಳ್ಳಕೆರೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
chalkere

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ