ಕೋವಿಡ್ ಲಸಿಕೆ ವಿತರಣೆ : ದೇಶದ ನಗರಗಳ ಪೈಕಿ ಬೆಂಗಳೂರು ನಗರಕ್ಕೆ ಮೊದಲ ಸ್ಥಾನ
ಶನಿವಾರ, 18 ಸೆಪ್ಟಂಬರ್ 2021 (10:48 IST)
ನವದೆಹಲಿ : ಕೋವಿಡ್ ಲಸಿಕೆ ವಿತರಣೆಯಲ್ಲಿ ಭಾರತ ವಿಶ್ವದಾಖಲೆ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ವಿಶೇಷ ಲಸಿಕಾ ಅಭಿಯಾನದಡಿ ನಿನ್ನೆ ಒಂದೇ ದಿನ 2.50 ಕೋಟಿ ಗೂ ಹೆಚ್ಚಿನ ಲಸಿಕೆ ನೀಡಲಾಗಿದೆ.
ಕೊರೊನಾ ಲಸಿಕೆ ವಿತರಣೆಯಲ್ಲಿ ದೇಶದ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ. ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ ಒಂದೇ ದಿನ 4,08,259 ಮಂದಿಗೆ ಲಸಿಕೆ ಹಾಕಲಾಗಿದೆ. ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ 70,936 ಮಂದಿಗೆ ಲಸಿಕೆ ನೀಡಲಾಗಿದೆ. ಈ ಮೂಲಕ ಲಸಿಕೆ ವಿತರಣೆಯಲ್ಲಿ ದೇಶದ ನಗರಗಳ ಪೈಕಿ ಬೆಂಗಳೂರು ಮೊದಲ ಸ್ಥಾನ ಪಡೆದಿದೆ.
ಲಸಿಕಾಕರಣದಲ್ಲಿ ದೇಶದ ನಗರಗಳ ಪೈಕಿ ಬಿಬಿಎಂಪಿ ಪ್ರಥಮ ಸ್ಥಾನದಲ್ಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ 84,280 ಮಂದಿಗೆ ಲಸಿಕೆ ನೀಡಿರುವ ದಕ್ಷಿಣ ವಲಯ ಅತೀ ಹೆಚ್ಚು ಲಸಿಕಾಕರಣ ಮಾಡಿದ ವಲಯವಾಗಿ ಪ್ರಥಮ ಸ್ಥಾನದಲ್ಲಿದೆ. ನಂತರ ಸ್ಥಾನದಲ್ಲಿ 75,874 ಮಂದಿ ಲಸಿಕೆ ಪಡೆದಿರುವ ಪಶ್ಚಿಮ ವಲಯವಿದೆ. ಕೊನೆಯ ಸ್ಥಾನದಲ್ಲಿ 22,834 ಮಂದಿಗೆ ಲಸಿಕೆ ನೀಡಿರುವ ಯಲಹಂಕ ವಲಯವಿದೆ.
ಶುಕ್ರವಾರ ದೇಶಾದ್ಯಂತ 2.50 ಕೋಟಿಗೂ ಹೆಚ್ಚು ಲಸಿಕೆ ನೀಡಲಾಗಿದ್ದು, ಬಿಹಾರ 28.7 ಲಕ್ಷ ಮೊದಲ ಸ್ಥಾನ ಪಡೆದುಕೊಂಡರೆ, ನಂತರದ ಸ್ಥಾನಗಳಲ್ಲಿ ಕರ್ನಾಟಕ 28.4 ಲಕ್ಷ, ಉತ್ತರ ಪ್ರದೇಶದಲ್ಲಿ 26.6 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಈ ಮೂಲಕ ದೇಶದಲ್ಲಿ ಒಟ್ಟಾರೆಯಾಗಿ 79 ಕೋಟಿ ಕೊರೊನಾ ಲಸಿಕೆ ನೀಡಲಾಗಿದೆ.