ಬೆಂಗಳೂರು: ಇಂದು ನವಂಬರ್ 1 ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ. ಕನ್ನಡ ತಾಯಿಯ ಹಬ್ಬಕ್ಕೆ ರಾಜ್ಯ ಸರ್ಕಾರ ಸರ್ಕಾರೀ ಅಧಿಕಾರಿಗಳಿಗೆ ಹೊಸ ಆದೇಶವೊಂದನ್ನು ಹೊರಡಿಸಿದೆ.
ಕರ್ನಾಟಕ ರಾಜ್ಯ ಉದಯವಾಗಿ 50 ವರ್ಷ ಪೂರೈಸಿದ ಹಿನ್ನಲೆಯಲ್ಲಿ ಎಲ್ಲಾ ಸರ್ಕಾರೀ ಕಚೇರಿ ಸಿಬ್ಬಂದಿಗಳಿಗೆ ಡಿಸಿಎಂ ಡಿಕೆ ಶಿವಕುಮಾರ್ ಕಡ್ಡಾಯವಾಗಿ ಕನ್ನಡ ಬಾವುಟದ ಟ್ಯಾಗ್ ಇರುವ ಐಡಿ ಕಾರ್ಡ್ ಬಳಕೆ ಮಾಡಲೇಬೇಕೆಂದು ಕಡ್ಡಾಯಗೊಳಿಸಿ ಆದೇಶ ನೀಡಿದ್ದಾರೆ.
ಸರ್ಕಾರೀ ಕಚೇರಿಯ ಎಲ್ಲಾ ಅಧಿಕಾರಿಗಳೂ ಕನ್ನಡ ರಾಜ್ಯೋತ್ಸವದೊಳಗಾಗಿ ಕಡ್ಡಾಯವಾಗಿ ತಮ್ಮ ಗುರುತಿನ ಚೀಟಿಗೆ ಕನ್ನಡ ಬಾವುಟದ ಬಣ್ಣವಾದ ಹಳದಿ-ಕೆಂಪು ಟ್ಯಾಗ್ ನ್ನೇ ಬಳಸಬೇಕು ಎಂದು ಆದೇಶ ಹೊರಡಿಸಲಾಗಿದೆ. ಈ ಮೂಲಕ ಕನ್ನಡಕ್ಕೆ ಗೌರವ ಸಲ್ಲಿಸಲು ಮುಂದಾಗಿದೆ. ಈ ಬಗ್ಗೆ ಈಗಾಗಲೇ ಎಲ್ಲಾ ಇಲಾಖೆಯ ಡಿಪಿಎಆರ್ ಗೆ ಸೂಚನೆ ನೀಡಲಾಗಿದೆ.
ಇದಲ್ಲದೆ, ಇಂದು ಕರ್ನಾಟಕದ ಎಲ್ಲಾ ಕಚೇರಿ, ಶಾಲೆ, ಕಾಲೇಜುಗಳು, ವಾಣಿಜ್ಯ ಮಳಿಗೆಗಳಲ್ಲಿ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸಲು ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಸಾಕಷ್ಟು ಹೊರ ರಾಜ್ಯದ, ದೇಶದ ಕಂಪನಿಗಳೂ ಇವೆ. ಆದರೆ ಇವುಗಳೂ ಇಂದು ಕನ್ನಡ ಬಾವುಟ ಹಾರಿಸಿ ಕನ್ನಡಾಂಬೆಗೆ ಗೌರವ ನೀಡಲು ಸೂಚಿಸಲಾಗಿದೆ.