ಚಿಕ್ಕೋಡಿ: ರೈತರ ಪಹಣಿಯಲ್ಲಿ ವಕ್ಫ್ ಆಸ್ತಿ ಎಂದು ನಮೂದಿಸಿದ್ದಕ್ಕೆ ಬಿಜೆಪಿ ನಾಯಕರು ಆಕ್ರೋಶ ಹೊರಹಾಕುತ್ತಿದ್ದು, ಇದೀಗ ಮಾಜಿ ಹಜ್ ಮತ್ತು ವಕ್ಫ್ ಬೋರ್ಡ್ ಸಚಿವೆ ಶಶಿಕಲಾ ಜೊಲ್ಲೆ ಕುಟುಂಬಕ್ಕೆ ವಕ್ಫ್ ಬೋರ್ಡ್ ಶಾಕ್ ನೀಡಿದೆ. ಜೊಲ್ಲೆ ದಂಪತಿಯ ಕಿರಿಯ ಪುತ್ರನಿಗೆ ಸೇರಿದ ಜಮೀನಿನ ಪಹಣಿ ಪತ್ರದಲ್ಲಿ “ವಕ್ಫ್ ಆಸ್ತಿ” ಎಂದು ನಮೂದಿಸಲಾಗಿದ್ದು, ಇದರಿಂದ ಅವರಿಗೆ ಹೊಸ ಕಂಟಕ ಎದುರಾಗಿದೆ.
ಬಿಜೆಪಿ ಶಾಸಕಿ ಶಶಿಕಲಾ ಜೊಲ್ಲೆ ಮತ್ತು ಮಾಜಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ದಂಪತಿಯ ಕಿರಿಯ ಪುತ್ರ ಬಸವಪ್ರಭು ಜೊಲ್ಲೆ ಅವರಿಗೆ ಸೇರಿದ 2 ಎಕರೆ 13 ಗುಂಟೆ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ಹೆಸರು ಸೇರ್ಪಡೆಯಾಗಿದೆ.
2021ರಲ್ಲಿ ಶಾಸಕಿ ಶಶಿಕಲಾ ಜೊಲ್ಲೆ ವಕ್ಫ್ ಬೋರ್ಡ್ ಸಚಿವರಾಗಿದ್ದ ಸಮಯದಲ್ಲೇ ತಮ್ಮ ಕಿರಿಯ ಪುತ್ರ ಬಸವಪ್ರಭು ಅವರಿಗೆ ಸೇರಿದ ಜಮೀನು ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ನಮೂದಾಗಿರುವುದು ತಿಳಿದುಬಂದಿದೆ. ಪಹಣಿ ಪತ್ರ ನೋಡಿ ಬಸವಪ್ರಭು ದಂಗಾಗಿದ್ದಾರೆ.
ಶಶಿಕಲಾ ಜೊಲ್ಲೆ ಅವರು ತಾವು ಸಚಿವೆಯಾಗಿದ್ದ ಸಮಯದಲ್ಲೇ ತಮ್ಮ ಪುತ್ರನ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ನಮೂದು ಆಗಿದ್ದು ವಿಪಾರ್ಯಾಸವಾಗಿದೆ. ಅಲ್ಲದೇ, ಇವರ ಅವಧಿಯಲ್ಲಿ ಅನೇಕ ರೈತರ ಜಮೀನಿನ ಪಹಣಿಯಲ್ಲಿ ವಕ್ಫ್ ಆಸ್ತಿ ಅಂತ ನಮೂದು ಮಾಡಲಾಗಿದೆ.