ಕನ್ನಡ ರಾಜ್ಯಭಾಷೆ, ಹಿಂದಿ ರಾಷ್ಟ್ರಭಾಷೆ: ಮುರಗೇಶ್ ನಿರಾಣಿ
ಗುರುವಾರ, 28 ಏಪ್ರಿಲ್ 2022 (16:14 IST)
ಹಿಂದಿ ಭಾಷೆ ರಾಷ್ಟ್ರಭಾಷೆಯೇ ಎಂಬ ಬಗ್ಗೆ ರಾಜ್ಯ ಸೇರಿದಂತೆ ನೆರೆಯ ರಾಜ್ಯಗಳಿಂದಲೂ ಬೆಂಬಲ ವ್ಯಕ್ತವಾಗಿರುವ ನಡುವೆ ಕರ್ನಾಟಕದಲ್ಲಿ ಸಚಿವ ಸ್ಥಾನ ಅಲಂಕರಿಸಿರುವ ಬಿಜೆಪಿಯ ಮುರುಗೇಶ್ ನಿರಾಣಿ ಉಲ್ಟಾ ಹೇಳಿಕೆ ನೀಡಿ ಅಚ್ಚರಿ ಮತ್ತು ಆಘಾತ ವ್ಯಕ್ತಪಡಿಸಿದ್ದಾರೆ.
ಸುದೀಪ್ ಹೇಳಿಕೆಗೆ ಸಿಎಂ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಎಚ್.ಡಿ.ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ಸೇರಿದಂತೆ ಹಲವಾರು ಗಣ್ಯರು ಬೆಂಬಲ ವ್ಯಕ್ತಪಡಿಸಿದ್ದು, ಹಿಂದಿ ರಾಷ್ಟ್ರ ಭಾಷೆ ಅಲ್ಲ. ಎಲ್ಲಾ ಭಾಷೆಗಳಿಗೂ ಸಮಾನ ಸ್ಥಾನವಿದೆ ಎಂದು ಹೇಳಿದ್ದರು.
ಸಂಪುಟದ ಪ್ರಭಾವಿ ಸಚಿವರಲ್ಲಿ ಒಬ್ಬರಾದ ಮುರುಗೇಶ್ ನಿರಾಣಿ, ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳುವ ಮೂಲಕ ಮತ್ತೆ ವಿತಂಡ ವಾದ ಮುಂದಿಟ್ಟಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಮುರುಗೇಶ್ ನಿರಾಣಿ, ಕನ್ನಡ ಪ್ರಾದೇಶಿಕ ಭಾಷೆ, ಹಿಂದಿ ರಾಷ್ಟ್ರೀಯ ಭಾಷೆ. ಹಿಂದಿ ಭಾಷೆಯೂ ನಮಗೆ ಬೇಕು. ಬೇರೆ ಭಾಷೆ ಕಲಿಯುವುದರಲ್ಲಿ ತಪ್ಪೇನಿಲ್ಲ. ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಎಂಬುದು ಮೊದಲಿನಿಂದಲೂ ಇದೆ, ಇದರಿಂದ ತಪ್ಪೇನಿಲ್ಲ. ಹೆಚ್ಚು ಭಾಷೆ ಕಲಿಯೋದ್ರಿಂದ ನಾವು ಶ್ರೀಮಂತರಾಗ್ತಿವಿ. ನಾವು ಕನ್ನಡಿಗರು, ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕು. ಆ ಬಳಿಕ ಬೇರೆ ಬೇರೆ ಭಾಷೆಗಳನ್ನು ಕಲಿಯಬೇಕು. ನಾನು ಗ್ರಾಮೀಣ ಪ್ರದೇಶದವನಾಗಿರುವುದರಿಂದ ಕನ್ನಡವನ್ನ ಪ್ರೀತಿಸುತ್ತೇನೆ. ಇತರ ಭಾಷೆಗಳನ್ನೂ ಪ್ರೀತಿಸುತ್ತೇನೆ ಎಂದು ತಿಳಿಸಿದ್ದಾರೆ.