ಬೆಂಗಳೂರು: ಕರ್ನಾಟಕವು ಒಂದು ರೀತಿಯಲ್ಲಿ ಡ್ರಗ್ಸ್‍ನ ಸ್ವರ್ಗವಾಗುತ್ತಿದೆ ಎಂದು ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಅವರು ಆರೋಪಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕವು ಒಂದು ರೀತಿಯಲ್ಲಿ ಡ್ರಗ್ಸ್‍ನ ಸ್ವರ್ಗವಾಗುತ್ತಿದೆ. ಈಶಾನ್ಯ ಭಾಗದ ರಾಜ್ಯಗಳು, ಪಂಜಾಬ್ ರಾಜ್ಯದಲ್ಲಿ ಯುವಕರ ಜೀವನವನ್ನು ಹಾಳು ಮಾಡಿದ್ದ ಡ್ರಗ್ಸ್, ಇವತ್ತು ಆ ರಾಜ್ಯಗಳ ಪಟ್ಟಿಗೆ ಕರ್ನಾಟಕ ಸೇರುತ್ತಿರುವುದು ಖೇದನೀಯ ವಿಷಯ ಎಂದು ತಿಳಿಸಿದರು.
ಕಲಬುರ್ಗಿ, ಬೆಂಗಳೂರು, ಮಂಗಳೂರು- ಎಲ್ಲ ಜಿಲ್ಲೆಗಳಲ್ಲಿ ಡ್ರಗ್ಸ್ ರಾಜಾರೋಷವಾಗಿ ಸಿಗುತ್ತಿದೆ. ಡ್ರಗ್ಸ್ ವಶ ಕುರಿತ ಸುದ್ದಿ ವಾರಕ್ಕೊಮ್ಮೆ ಸುದ್ದಿಯಾಗುತ್ತಿದೆ. ಕಲಬುರ್ಗಿಯಲ್ಲಿ ಲಿಂಗರಾಜ್ ಕಣ್ಣಿ ಎಂಬ ಕಾಂಗ್ರೆಸ್ಸಿನ ಗುಲ್ಬರ್ಗ ದಕ್ಷಿಣ ಬ್ಲಾಕ್ ಅಧ್ಯಕ್ಷ, ಪ್ರಮುಖ ನಾಯಕ, ಪ್ರಿಯಾಂಕ್ ಖರ್ಗೆ, ಶಾಸಕ ಅಲ್ಲಮಪ್ರಭು ಪಾಟೀಲರಿಗೆ ಆತ್ಮೀಯರಾಗಿರುವ ವ್ಯಕ್ತಿ ಬಂಧನವಾಗಿದೆ. ಅನೇಕ ವರ್ಷಗಳಿಂದ ಈತ ಡ್ರಗ್ಸ್ ವ್ಯವಹಾರದಲ್ಲಿ ತೊಡಗಿದ್ದವ ಎಂದು ದೂರಿದರು.
ಮಲ್ಲಿನಾಥ್ ಸೊಂತ್ ಎಂಬವರ ಮಗನೂ ಡ್ರಗ್ಸ್ ಸಾಗಾಟದಲ್ಲಿ ಭಾಗಿಯಾಗಿದ್ದು, ಅವನೂ ಕಾಂಗ್ರೆಸ್ ಕಾರ್ಯಕರ್ತ ಎಂದು ಆರೋಪಿಸಿದರು. ಅವರು ಮಲ್ಲಿಕಾರ್ಜುನ ಖರ್ಗೆಯವರಿಗೆ ಆಪ್ತನಾಗಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿದರು.
ಪ್ರಿಯಾಂಕ್ ಖರ್ಗೆಯವರ ಸುತ್ತಮುತ್ತ ಇರುವವರು
ನಿಷೇಧಿತ 120 ಬಾಟಲ್ ಸಿಕ್ಕಿದೆ. ಇದರ ಸಾಗಾಟ ಮಾಡುತ್ತಿದ್ದರು. ಇದು ಲಕ್ಷಾಂತರ ರೂ.ಗೆ ಮಾರಾಟ ಆಗುತ್ತಿತ್ತು ಎಂಬ ಮಾಹಿತಿ ಇದೆ. ಬಿಜೆಪಿಯವರನ್ನು ಹಾಗೂ ಅಭ್ಯರ್ಥಿಗಳ ಬಗ್ಗೆ ವ್ಯಂಗ್ಯವಾಗಿ ಮಾತನಾಡುತ್ತಿದ್ದ ಪ್ರಿಯಾಂಕ್ ಖರ್ಗೆಯವರ ಸುತ್ತಮುತ್ತ ಇರುವವರು ಎಂಥ ಚಿನ್ನದಂಥ ಶಿಷ್ಯಂದಿರು? ಎಂಥ ಚಿನ್ನದಂಥ ನಾಯಕರು ನಿಮ್ಮ ಕಾಂಗ್ರೆಸ್ ಪಕ್ಷದಲ್ಲಿದ್ದಾರೆ ಎಂದು ಎನ್.ರವಿಕುಮಾರ್ ಅವರು ಪ್ರಶ್ನಿಸಿದರು.
ಕಲಬುರ್ಗಿ ರಿಪಬ್ಲಿಕ್‍ನಲ್ಲಿ ಪೊಲೀಸ್ ರಕ್ಷಣೆ, ಕಣ್ಗಾವಲಿನಲ್ಲಿ ಡ್ರಗ್ಸ್ ಅವ್ಯವಹಾರ ನಡೆದಿದೆಯೇ? ಇದರ ಕುರಿತು ಗೃಹ ಇಲಾಖೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು. ಪ್ರಿಯಾಂಕ್ ಖರ್ಗೆಯವರು ನೈತಿಕ ಹೊಣೆ ಹೊರಬೇಕು. ಕಲಬುರ್ಗಿ ಜಿಲ್ಲೆ 50 ವರ್ಷಗಳಿಂದ ಖರ್ಗೆಯವರ ಕುಟುಂಬದ ಕೈಯಲ್ಲೇ ಇದೆ. ಡ್ರಗ್ಸ್ ಶೂನ್ಯ ಪ್ರಮಾಣದಲ್ಲಿ ಇರಬೇಕಿತ್ತು. ಏನು ಕ್ರಮ ತೆಗೆದುಕೊಳ್ಳುತ್ತೀರಿ ಎಂದು ಪ್ರಶ್ನಿಸಿದರು.
ಗುಲ್ಬರ್ಗದಲ್ಲಿ ಎರಡ್ಮೂರು ತಿಂಗಳ ಹಿಂದೆ ಡ್ರಗ್ಸ್ ವಶಕ್ಕೆ ಪಡೆಯಲಾಗಿತ್ತು. ಆಗಲೂ ಯಾರ ಮೇಲೂ ಕ್ರಮ ಕೈಗೊಂಡಿರಲಿಲ್ಲ. ಕಣ್ಣಿ ಬಂಧನಕ್ಕೆ ಮೊದಲು ಪ್ರಿಯಾಂಕ್ ಖರ್ಗೆ- ಅಲ್ಲಿನ ಕಮೀಷನರ್ ಡ್ರಗ್ಸ್ ವಿರುದ್ಧ ಅಭಿಯಾನ ಮಾಡುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಇದೀಗ ಲಿಂಗರಾಜ್ ಕಣ್ಣಿಯನ್ನು ಮಹಾರಾಷ್ಟ್ರದ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕದ, ಗುಲ್ಬರ್ಗದ ಪೊಲೀಸರು ಲಿಂಗರಾಜ್ ಕಣ್ಣಿಯನ್ನು ಬಂಧಿಸಿದ್ದಲ್ಲ. ಪ್ರಿಯಾಂಕ್ ಖರ್ಗೆ ಮತ್ತು ಅಲ್ಲಮಪ್ರಭು ಪಾಟೀಲರು ಇವರನ್ನು ರಕ್ಷಿಸಿದ ಕಾರಣ ಇವರನ್ನು ಕರ್ನಾಟಕದ ಪೊಲೀಸರು ಬಂಧಿಸಿರಲಿಕ್ಕಿಲ್ಲ ಎಂದು ಸಂಶಯ- ಅನುಮಾನ ತಮ್ಮದು ಎಂದು ತಿಳಿಸಿದರು.
ಪ್ರಿಯಾಂಕ್ ಖರ್ಗೆಯವರು ತಮ್ಮ ಇಲಾಖೆ ಬಿಟ್ಟು ದೇಶದ ಎಲ್ಲ ವಿಚಾರಗಳನ್ನು ಮಾತನಾಡುತ್ತಾರೆ. ಅವರು ಮಹಾನ್ ಪಂಡಿತರು. ನರೇಂದ್ರ ಮೋದಿಜೀ, ವಿದೇಶಾಂಗ ಸಚಿವರ ಬಗ್ಗೆ ಮಾತನಾಡುತ್ತಾರೆ. ಅಮೆರಿಕ- ಭಾರತ, ಭಾರತ- ಚೀನಾ ಸಂಬಂಧ, ರಕ್ಷಣಾ ಇಲಾಖೆ ಬಗ್ಗೆ ಮಾತನಾಡುತ್ತಾರೆ. ಅವರು ಬಹುಶಃ ಭಾರತದ ಪ್ರಧಾನಿ ಆಗಬೇಕಿತ್ತೇನೋ ಎಂದು ನುಡಿದರು.
ನಿಷೇಧಿತ ಡ್ರಗ್ ಅನ್ನು ರಾಜಾರೋಷವಾಗಿ ಸಾಗಣೆ ಮಾಡುವುದಾದರೆ, ಇದು ಅಲ್ಲಿನ ಪೊಲೀಸರಿಗೆ ಗೊತ್ತಾಗದೆ ಇರುವುದು ಆಶ್ಚರ್ಯ ಉಂಟು ಮಾಡುತ್ತಿದೆ ಎಂದು ಹೇಳಿದರು. ಪ್ರಿಯಾಂಕ್ ಖರ್ಗೆ ಶಿಷ್ಯರಾಗಿದ್ದರೆ ಸಾಕು; ಯಾವುದೇ ಡ್ರಗ್ಸ್ ಸಾಗಾಟ, ಅಪರಾಧ ಕುಕೃತ್ಯ ಮಾಡಿದರೆ ಬಚಾವಾಗಬಹುದೆಂದು ತಿಳಿದಂತಿದೆ ಎಂದರಲ್ಲದೆ, ಕಣ್ಣಿ ಬಂಧನಕ್ಕೆ ಮಹಾರಾಷ್ಟ್ರ ಪೊಲೀಸರನ್ನು ಅಭಿನಂದಿಸುವುದಾಗಿ ಹೇಳಿದರು.
ಕೈಗಾರಿಕೆಗಳ ಸ್ಥಳಾಂತರ ಯಾಕೆ..?
ಕರ್ನಾಟಕ ರಾಜ್ಯದಲ್ಲಿನ ಟೊಯೊಟೊ ಇಲೆಕ್ಟ್ರಿಕಲ್ ಕಾರ್ ಉತ್ಪಾದಿಸುವ 25 ಸಾವಿರ ಕೋಟಿ ಹೂಡಿಕೆಯ ಕೈಗಾರಿಕೆ ಮಹಾರಾಷ್ಟ್ರಕ್ಕೆ ಸ್ಥಳಾಂತರ ಆಗಿದೆ. ಇದರಿಂದ 30 ಸಾವಿರ ಜನರಿಗೆ ಉದ್ಯೋಗ ಸಿಗುತ್ತಿತ್ತು. ಇದು ಯಾಕೆ ವರ್ಗಾಯಿಸಲ್ಪಟ್ಟಿದೆ ಪ್ರಿಯಾಂಕ್ ಖರ್ಗೆಯವರೇ ಎಂದು ರವಿಕುಮಾರ್ ಅವರು ಕೇಳಿದರು.
ಇನ್ಫೋಸಿಸ್ ಸಂಸ್ಥೆಯ ಹೊಸ ಶಾಖೆ ಹೈದರಾಬಾದ್‍ಗೆ ಸ್ಥಳಾಂತರ ಆಗಿದೆ. ಆಪಲ್ ಫಾಕ್ಸ್‍ಕಾನ್ ಬ್ರ್ಯಾಂಡ್ ತಮಿಳುನಾಡಿಗೆ ಸ್ಥಳಾಂತರ ಆಗಿದೆ. ಯಾಕೆ? ಇವು ಅತ್ಯಂತ ದಕ್ಷರು, ಸಮರ್ಥರು ಇರುವ ಕರ್ನಾಟಕದಲ್ಲೇ ಇರಬೇಕಿತ್ತು ಅಲ್ಲವೇ ಎಂದು ಪ್ರಶ್ನೆ ಮಾಡಿದರು.
ಹಿರಿಯ ಕೈಗಾರಿಕೋದ್ಯಮಿ ಮೋಹನ್‍ದಾಸ್ ಪೈ ಅವರು ಇದೊಂದು ಭ್ರಷ್ಟ ಸರಕಾರ ಎಂದಿದ್ದಾರೆ ಎಂದು ಗಮನ ಸೆಳೆದರು. ಕಲಬುರ್ಗಿಯಲ್ಲಿ ಸರಕಾರದ ಆಡಳಿತವನ್ನು ಹುಡುಕುಬೇಕಾಗಿದೆ. ಪ್ರಿಯಾಂಕ್ ಖರ್ಗೆಯವರ ಕಾರ್ಯದ ಬಗ್ಗೆ ಸರಕಾರ ಉತ್ತರಿಸಬೇಕು ಎಂದು ತಿಳಿಸಿದರು.
ಕುಂಟುನೆಪ ಸರಿಯಲ್ಲ..
ದೇಶದಲ್ಲಿ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುತ್ತಿರುವವರು ಸಚಿವ ನಿತಿನ್ ಗಡ್ಕರಿಯವರು. 50-60 ವರ್ಷಗಳಿಂದ ಆಗದೇ ಇರುವ ಕೆಲಸವನ್ನು ಗಡ್ಕರಿಯವರು ಮಾಡಿದ್ದಾರೆ. ಕರ್ನಾಟಕ ರಾಜ್ಯದ ಸಿಗಂದೂರು ಸೇತುವೆಗೆ ಅವರೇ ಶಿಲಾನ್ಯಾಸ ಮಾಡಿ ಅವರೇ ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಳಿಸಿ ಉದ್ಘಾಟಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ದೇಶದಲ್ಲಿ ಕಾಂಗ್ರೆಸ್ ಸರಕಾರ ಇದ್ದಾಗ ದಿನಕ್ಕೆ 7-8 ಕಿಮೀ ಹೆದ್ದಾರಿ ಕಾಮಗಾರಿ ನಡೆಯುತ್ತಿತ್ತು. ಇದೀಗ ಅದು 34 ಕಿಮೀಗೆ ಏರಿದೆ ಎಂದರು.
ಅಂಥ ದಕ್ಷ ವ್ಯಕ್ತಿ ಕರ್ನಾಟಕಕ್ಕೆ ಬಂದರೆ ನಮ್ಮನ್ನು ಕರೆದಿಲ್ಲ ಎಂದು ಕುಂಟು ನೆಪ ಹೇಳಿ ಕಾರ್ಯಕ್ರಮಕ್ಕೆ ಹಾಜರಾಗದೇ ಇರುವುದು ಸಿಎಂ, ಡಿಸಿಎಂಗೆ ಶೋಭೆ ತರುವುದಿಲ್ಲ ಎಂದು ಆಕ್ಷೇಪಿಸಿದರು. ಇದೊಂದು ಕುಂಟುನೆಪ ಅಷ್ಟೇ ಎಂದು ಟೀಕಿಸಿದರು. ಈಗ ಅನುಷ್ಠಾನದಲ್ಲಿರುವ ಯೋಜನೆಗಳು 3 ಲಕ್ಷ ಕೋಟಿಯದು. ಕರ್ನಾಟಕಕ್ಕೇ 5 ಲಕ್ಷ ಕೋಟಿ ಹೂಡಿಕೆ ಮಾಡುವುದಾಗಿ ಗಡ್ಕರಿಯವರು ಹೇಳಿದ್ದಾಗಿ ಗಮನ ಸೆಳೆದರು. ಮುಖ್ಯಮಂತ್ರಿಗಳಿಗೆ ಗಡ್ಕರಿಯವರ ಇಲಾಖೆಯಿಂದ, ಸಂಸದ ರಾಘವೇಂದ್ರರ ಪತ್ರ ಹೋಗಿತ್ತು ಎಂದು ಪತ್ರಗಳನ್ನು ಪ್ರದರ್ಶಿಸಿದರು.
ಬಿಜೆಪಿ ರಾಜ್ಯ ವಕ್ತಾರ ಹರಿಪ್ರಕಾಶ್ ಕೋಣೆಮನೆ ಅವರು ಮಾತನಾಡಿ, ಆನ್‍ಲೈನ್ ಕಾರ್ಯಕ್ರಮದಲ್ಲಾದರೂ ಹಾಜರಾಗಲು ಎರಡನೇ ಪತ್ರ ಕಳುಹಿಸಿದ್ದರು. ಇದು ಮುಖ್ಯಮಂತ್ರಿಯವರ ಪಲಾಯನವಾದ ಎಂದು ತಿಳಿಸಿದರು. ಕಾಂಗ್ರೆಸ್ಸಿಗರು ಕೇಂದ್ರ ಸರಕಾರದ ವಿರುದ್ಧ ಮಾಡುವ ಆರೋಪಕ್ಕೆ ಉತ್ತರ ಸಿಗಲಿದೆ ಎಂಬ ಕಾರಣಕ್ಕಾಗಿ ಪಲಾಯನವಾದ ಎಂಬ ಅನುಮಾನ ತಮ್ಮದು ಎಂದು ಹೇಳಿದರು. ಬಿಜೆಪಿ ರಾಜ್ಯ ವಕ್ತಾರ ಅಶೋಕ್ ಗೌಡ ಅವರು ಉಪಸ್ಥಿತರಿದ್ದರು.