ಬೆಂಗಳೂರು: ಕೈವಾರ ತಾತಯ್ಯನವರ ಜಯಂತಿ ಕಾರ್ಯಕ್ರಮದ ವೇದಿಕೆಯಲ್ಲಿ ಆವಾಜ್ ಹಾಕಿದ ಶಾಸಕ ಪ್ರದೀಪ್ ಈಶ್ವರ್ ಗೆ ಬಿಜೆಪಿ ತಿರುಗೇಟು ನೀಡಿದ್ದು ನಿಮಗೆ ಅಷ್ಟೊಂದು ಪ್ರಚಾರದ ಹುಚ್ಚಿದ್ದರೆ ಮಜಾ ಟಾಕೀಸ್ ಗೋ, ಕಾಮಿಡಿ ಕಿಲಾಡಿ ಶೋಗೋ ಹೋಗಿ ಎಂದು ಟಾಂಗ್ ಕೊಟ್ಟಿದೆ.
ನಿನ್ನೆ ಸಂಜೆ ನಗರದಲ್ಲಿ ಕೈವಾರ ತಾತಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಪ್ರದೀಪ್ ಈಶ್ವರ್ ವೇದಿಕೆಯಲ್ಲಿ ಮಾತನಾಡುವಾಗ ಮುಂಭಾಗದಲ್ಲಿ ಕೂತಿದ್ದ ಬಲಿಜ ಸಮುದಾಯದ ಪಿಕೆ ಸುರೇಶ್ ತಮಗೆ ಸ್ಥಾನ ಮಾನ ನೀಡದೇ ಇರುವುದಕ್ಕೆ ಅಪಸ್ವರವೆತ್ತಿದರು.
ಈ ವೇಳೆ ಇಬ್ಬರ ನಡುವೆ ವಾಗ್ದಾದ ನಡೆಯಿತು. ಆಗ ಪ್ರದೀಪ್ ಈಶ್ವರ್ ಏಯ್ ಸುಮ್ನೇ ಕೂತ್ಕೊಳ್ಳಯ್ಯ. ಇದು ನಿಮ್ಮಪ್ಪನ ಸರ್ಕಾರ ಅಲ್ಲ, ಸಿದ್ದರಾಮಯ್ಯನವರ ಸರ್ಕಾರ. ಇದು ಸಿದ್ದರಾಮಯ್ಯನವರ ಕಾರ್ಯಕ್ರಮ ಎಂದು ಆವಾಜ್ ಹಾಕಿದ್ದರು. ವೇದಿಕೆಯಲ್ಲಿ ಬಿಜೆಪಿ ಸಂಸದ ಪಿಸಿ ಮೋಹನ್ ಕೂಡಾ ಇದ್ದರು. ಹಾಗಿದ್ದರೆ ನಾನು ಇಲ್ಲಿ ಇರಬಾರದಿತ್ತೇ ಎಂದು ಅವರೂ ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ಘಟನೆ ಬಗ್ಗೆ ಟ್ವೀಟ್ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಆಕ್ಸಿಡೆಂಟಲ್ ಎಂಎಲ್ ಎ ಪ್ರದೀಪ್ ಈಶ್ವರ್ ಅವರೇ, ಅಲ್ಲಿ ನಡೆಯುತ್ತಿರುವುದು ಬಿಜೆಪಿ ಕಾರ್ಯಕ್ರಮವೂ ಅಲ್ಲ, ಕಾಂಗ್ರೆಸ್ ಕಾರ್ಯಕ್ರಮವೂ ಅಲ್ಲ, ಅದು ಕೈವಾರ ತಾತಯ್ಯನವರ ಕಾರ್ಯಕ್ರಮ. ನಿಮಗೆ ಅಷ್ಟೊಂದು ಪ್ರಚಾರದ ಗೀಳಿದ್ದರೆ ಮಜಾ ಟಾಕೀಸ್ ಶೋನೋ, ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಹೋಗಿ. ನಿಮ್ಮ ಪ್ರಚಾರದ ಹಪಹಪಿಗೆ ಕೈವಾರ ತಾತಯ್ಯನವರನ್ನು ಅವಮಾನಿಸಬೇಡಿ ಎಂದು ತಿರುಗೇಟು ನೀಡಿದೆ.