ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಳ್ಳಾರಿಯಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ

Krishnaveni K

ಬುಧವಾರ, 29 ಮೇ 2024 (16:47 IST)
ಬೆಂಗಳೂರು:  ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ 187 ಕೋಟಿ ರೂ ಹಗರಣ ಖಂಡಿಸಿ ಹಾಗೂ ಆತ್ಮಹತ್ಯೆ ಮಾಡಿಕೊಂಡಿರುವ ಅಧಿಕಾರಿಯ ಸಾವಿಗೆ ನ್ಯಾಯ ಒದಗಿಸಲು ಆಗ್ರಹಿಸಿ ಭಾರತೀಯ ಜನತಾ ಪಕ್ಷದಿಂದ ಬಳ್ಳಾರಿಯಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು.

ವಿಧಾನ ಪರಿಷತ್ ಸದಸ್ಯ ಹಾಗೂ ಪರಿಷತ್ತಿನ ವಿಪಕ್ಷದ ಮುಖ್ಯ ಸಚೇತಕ ಎನ್.ರವಿಕುಮಾರ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದ್ದು, ಸಾವಿರಾರು ಮಂದಿ ಕಾರ್ಯಕರ್ತರು ಬೀದಿಗಳಲ್ಲಿ ಮೆರವಣಿಗೆ ನಡೆಸಿ ಕಾಂಗ್ರೆಸ್ ಸರಕಾರದ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.

ನಿಗಮದ ಖಾತೆಯಿಂದ ಬಡವರ ಅಭಿವೃದ್ಧಿಗೆ ಮೀಸಲಾದ 187 ಕೋಟಿ ರೂ.ಗಳನ್ನು ನಕಲಿ ಖಾತೆಗಳಿಗೆ ವರ್ಗಾಯಿಸಿ ಭ್ರಷ್ಟಾಚಾರವೆಸಗಿದ ಸಚಿವ ನಾಗೇಂದ್ರ ಅವರನ್ನು ಸಂಪುಟದಿಂದ ವಜಾ ಮಾಡಬೇಕೆಂದು ಆಗ್ರಹಿಸಿ ಮೆರವಣಿಗೆ ನಡೆಸಲಾಯಿತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ವಾಲ್ಮೀಕಿ ನಿಗಮದಿಂದ 187 ಕೋಟಿ ರೂ.ಗಳನ್ನು ಅಕ್ರಮವಾಗಿ ನಕಲಿ ಖಾತೆಗಳಿಗೆ ವರ್ಗಾವಣೆ ಮಾಡಿರುವುದು ಯಾವ ಉದ್ದೇಶಕ್ಕಾಗಿ? ಎಂದು ರವಿಕುಮಾರ್ ಪ್ರಶ್ನಿಸಿದರು. ಈ ಹಗರಣದ ಹಿಂದಿರುವ ಸಚಿವ ನಾಗೇಂದ್ರ ಅವರು 24 ಗಂಟೆಯೊಳಗೆ ರಾಜೀನಾಮೆ ನೀಡದೇ ಇದ್ದರೆ  ರಾಜ್ಯಾದ್ಯಂತ ಪ್ರತಿಭಟನೆಯನ್ನು ವಿಸ್ತರಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
 
 
ಹೇಗೆ ವರ್ಗಾವಣೆ ಮಾಡಿದರು?
ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ನಾಗೇಂದ್ರ ರಾಜೀನಾಮೆಯನ್ನು ಕೇಳುತ್ತಿದ್ದೇವೆ. ಏಕೆಂದರೆ ತಮ್ಮ ಇಲಾಖೆಯ 187 ಕೋಟಿ ಹಣವನ್ನು ಆಡಳಿತ ನಿರ್ದೇಶಕರಿಗೆ ಗೊತ್ತಿಲ್ಲದಂತೆ ಹೇಗೆ ವರ್ಗಾವಣೆ ಮಾಡಿದರು?

50 ಕೋಟಿ ಹಣವನ್ನು ಡ್ರಾ ಮಾಡಿಕೊಂಡು ಬನ್ನಿ ಎಂದು ಅಧಿಕಾರಿಗಳಿಗೆ ಮೌಖಿಕವಾಗಿ ಹೇಳುತ್ತಾರೆ ಸಚಿವರು. ಆಗ ಅಧಿಕಾರಿಗಳಿಗೆ ಸಂದೇಹ ಬಂದಿದೆ. ಅವರು ಒಪ್ಪುವುದಿಲ್ಲ. ಆಗ ಸಂಬಂಧಿತ ಅಧಿಕಾರಿಯ ಸಹಿ ಇಲ್ಲದೆ ಹಣ ಡ್ರಾ ಮಾಡಿಕೊಳ್ಳುತ್ತಾರೆ ಸಚಿವ ನಾಗೇಂದ್ರ ಕಡೆಯವರು.    
 
ಯಾರಿಗೋಸ್ಕರ ಇದನ್ನು ಡ್ರಾ ಮಾಡಿದರು, ಯಾರಿಗೆ ಕೊಟ್ಟರು?. 50 ಕೋಟಿ ಹಣ ಡ್ರಾ ಆಗಿದೆ ಅಂತ ಮ್ಯಾನೇಜರ್ ಹೇಳಿದಾಗ, ನನಗೆ ಗೊತ್ತಿಲ್ಲದಂತೆ ಹೇಗೆ ಡ್ರಾ ಆಯಿತು ಅಂತ ಚಂದ್ರಶೇಖರ್ ಪ್ರಶ್ನಿಸುತ್ತಾರೆ. ನಂತರ ಡೆತ್‍ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೌಖಿಕವಾಗಿ ಹಣ ಡ್ರಾ ಮಾಡಲು ಖುದ್ದಾಗಿ ಸಚಿವರೇ ಹೇಳಿದ್ದರಿಂದ ಅಧಿಕಾರಿ ಚಂದ್ರಶೇಖರ್ ಒತ್ತಡಕ್ಕೆ ಒಳಗಾಗಿದ್ದರು. ಹೀಗಾಗಿ ಅವರ ಆತ್ಮಹತ್ಯೆಗೆ ನಾಗೇಂದ್ರ ಅವರೇ ಹೊಣೆಯಾಗಿದ್ದು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ರವಿಕುಮಾರ್ ಆಗ್ರಹಿಸಿದರು. 

ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ..? ಯಾಕೆ ನೈತಿಕ ಹೊಣೆ ಹೊತ್ತುಕೊಂಡಿಲ್ಲ? ಅವತ್ತು ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ ಮಾಡಿಕೊಂಡಾಗ ಬಿಜೆಪಿ ಸರಕಾರದ ವಿರುದ್ಧ 40 ಪಸೆರ್ಂಟ್ ಸರಕಾರ ಎಂದು ಸುಳ್ಳು ಆಪಾದನೆಗಳನ್ನು ಮಾಡಿ ಗದ್ದಲವೆಬ್ಬಿಸಿದ್ದ ಸಿದ್ದರಾಮಯ್ಯ-ಡಿ.ಕೆ ಶಿವಕುಮಾರ್ ಅವರು ಈಗ ಏಕೆ ಬಾಯಿಮುಚ್ಚಿಕೊಂಡು ಕುಳಿತಿದ್ದಾರೆ? ಎಂದು ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಅಧಿಕಾರಿಗಳು, ಗುತ್ತಿಗೆದಾರರು, ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ಸರಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯಲು ಯಾವುದೇ ನೈತಿಕತೆ ಇಲ್ಲ ಎಂದು ಅವರು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು. ಇದೇ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಸಚಿವ ನಾಗೇಂದ್ರ ಅವರ ಪ್ರತಿಕೃತಿ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಮಹಿಳೆಯರೂ ಸಹ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದು, ಸಚಿವರ ರಾಜೀನಾಮೆಗೆ ಆಗ್ರಹಿಸಿದರು.
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ