ನವದೆಹಲಿ: ಲೋಕಸಭೆ ಚುನಾವಣೆ 2024 ರ ಮತದಾನ ಪ್ರಕ್ರಿಯೆ ಕೊನೆಯ ಹಂತದಲ್ಲಿದ್ದು, ಇದೀಗ ಮತ ಎಣಿಕೆಗೆ ಕ್ಷಣಗಣನೆ ಶುರುವಾಗಿದೆ. ಈ ಬಾರಿ ಯಾರು ಗೆಲ್ಲಬಹುದು ಎಂದು ಈಗಾಗಲೇ ಬೆಟ್ಟಿಂಗ್ ಶುರುವಾಗಿದೆ.
2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಏಕಾಂಗಿಯಾಗಿ 303 ಸ್ಥಾನ ಗೆದ್ದು ಬಹುಮತ ಸಾಧಿಸಿತ್ತು. ಎನ್ ಡಿಎ ಕೂಟಕ್ಕೆ 352 ಸ್ಥಾನಗಳು ಸಿಕ್ಕಿದ್ದವು. ಈ ಬಾರಿ 400 ಪ್ಲಸ್ ಗುರಿ ಹಾಕಿಕೊಂಡು ಕಣಕ್ಕಿಳಿದಿರುವ ಎನ್ ಡಿಎ ಮತ್ತೆ ಅಧಿಕಾರಕ್ಕೆ ಬರಬಹುದು ಎಂಬ ವಿಶ್ವಾಸದಲ್ಲಿದೆ. ಬಾಜಿ ಕಟ್ಟುವವರಿಗೂ ಮೋದಿ ಸರ್ಕಾರ ಫೇವರಿಟ್ ಆಗಿದೆ. ಮೋದಿ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಬೆಟ್ಟಿಂಗ್ ನಡೆಯುತ್ತಿದೆ.
ಇನ್ನೊಂದೆಡೆ ಕಾಂಗ್ರೆಸ್ ನೇತೃತ್ವದ ಯುಪಿಎ ಕಳೆದ ಬಾರಿ ಕೇವಲ 91 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ಇಂಡಿಯಾ ಒಕ್ಕೂಟದ ನೇತೃತ್ವದಲ್ಲಿ ಹೆಚ್ಚು ಸ್ಥಾನ ಗೆಲ್ಲುವ ನಿರೀಕ್ಷೆಯಿದೆ. ಅದರಲ್ಲೂ ದಕ್ಷಿಣದ ಪ್ರಾಂತ್ಯಗಳಲ್ಲಿ ಕಾಂಗ್ರೆಸ್ ಗೆ ಹೆಚ್ಚು ಮತ ಗಳಿಸುವ ವಿಶ್ವಾಸವಿದೆ. ಆದರೂ ಬಹುಮತ ಬಾರದು ಎಂಬುದು ತಜ್ಞರ ಅಭಿಮತ.
ಹಾಗಿದ್ದರೂ ಕಳೆದ ಬಾರಿಗಿಂತ ಹೆಚ್ಚು ಸ್ಥಾನ ಗಿಟ್ಟಿಸಿಕೊಂಡರೆ ಅದು ಇಂಡಿಯಾ ಒಕ್ಕೂಟಕ್ಕೆ ಪ್ಲಸ್ ಪಾಯಿಂಟ್ ಇದ್ದಂತೆ. ಈ ಬಾರಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೂ ಕಳೆದ ಬಾರಿಯಷ್ಟು ಸ್ಥಾನ ಸಿಗುವುದು ಕಷ್ಟ ಎನ್ನಲಾಗುತ್ತಿದೆ. ಹಾಗಿದ್ದರೂ ಅಂತಿಮವಾಗಿ ಮತದಾರನ ಲೆಕ್ಕಾಚಾರ ಹೇಳಲಾಗದು. ಯಾಕೆಂದರೆ ಕಳೆದ ಬಾರಿಯೂ ಬಿಜೆಪಿಗೆ 2014 ರಷ್ಟು ಮತಗಳು ಬಾರದು ಎಂದೇ ಎಲ್ಲರೂ ಲೆಕ್ಕಾಚಾರ ಹಾಕಿದ್ದರು. ಆದರೆ ಕೊನೆಗೆ ಮತದಾರ ಎಲ್ಲರ ಲೆಕ್ಕಾಚಾರಗಳನ್ನು ಉಲ್ಟಾ ಮಾಡಿ ಬಿಜೆಪಿ ಏಕಾಂಗಿಯಾಗಿ ಬಹುಮತ ಸಾಧಿಸುವಷ್ಟು ಮತದಾನ ಮಾಡಿದ್ದ. ಹೀಗಾಗಿ ಈ ಬಾರಿಯ ಚುನಾವಣಾ ಫಲಿತಾಂಶದ ಮೇಲೂ ಎಲ್ಲರ ದೃಷ್ಟಿ ನೆಟ್ಟಿದೆ.