ಬೆಂಗಳೂರು: ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ವಿಧಾನಸಭೆ ಕ್ಷೇತ್ರಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಸಮೀಕ್ಷೆಗಳ ಪ್ರಕಾರವೇ ಫಲಿತಾಂಶ ಬರುವಂತೆ ಕಾಣುತ್ತಿದೆ.
ಆರಂಭಿಕ ಸುತ್ತಿನ ಮತ ಎಣಿಕೆಯಲ್ಲಿ ಸಂಡೂರಿನಲ್ಲಿ ಅಂಚೆ ಮತಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಅನ್ನಪೂರ್ಣ ಮುನ್ನಡೆ ಗಳಿಸಿದ್ದಾರೆ. ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಪುತ್ರ, ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಮುನ್ನಡೆಯಲ್ಲಿದ್ದರೆ ಚನ್ನಪಟ್ಟಣದಲ್ಲಿ ಕೊಂಚ ನಿಧಾನವಾಗಿ ಮತ ಎಣಿಕೆ ಕಾರ್ಯ ಶುರುವಾಗಿದೆ.
ಮತದಾನೋತ್ತರ ಸಮೀಕ್ಷೆಗಳ ಪ್ರಕಾರ ಈ ಬಾರಿ ಸಂಡೂರಿನಲ್ಲಿ ಕಾಂಗ್ರೆಸ್, ಶಿಗ್ಗಾಂವಿಯಲ್ಲಿ ಬಿಜೆಪಿ ಮತ್ತು ಚನ್ನಪಟ್ಟಣದಲ್ಲಿ ಎನ್ ಡಿಎ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆಲ್ಲಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆರಂಭಿಕ ಮತ ಎಣಿಕೆ ಕಾರ್ಯ ನೋಡಿದರೆ ಸಮೀಕ್ಷೆಗಳ ಪ್ರಕಾರವೇ ಫಲಿತಾಂಶ ಬರುವಂತೆ ಕಾಣುತ್ತಿದೆ.
ಚನ್ನಪಟ್ಟಣದಲ್ಲಿ ಕೊಂಚ ತಡವಾಗಿ ಮತ ಎಣಿಕೆ ಶುರುವಾಗಿದೆ. ಶಿಗ್ಗಾಂವಿ ಮತ್ತು ಸಂಡೂರಿನಲ್ಲಿ ಅಂಚೆ ಮತಗಳ ಎಣಿಕೆ ಪೂರ್ತಿಯಾಗಿದೆ. ಚನ್ನಪಟ್ಟಣದಲ್ಲಿ ಈ ಬಾರಿ ಶೇ.88.81 ಮತದಾನವಾಗಿತ್ತು. ಮತ ಎಣಿಕೆ ನಡೆಯುವ ಸ್ಥಳದಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ.