ಬೆಂಗಳೂರು: ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ ಸರ್ಕಾರ ಬಂಪರ್ ಗಿಫ್ಟ್ ನೀಡಿದೆ. ಇನ್ನು ಮುಂದೆ ತಿಂಗಳಿಗೆ ಒಂದು ವೇತನ ಸಹಿತ ಮುಟ್ಟಿನ ರಜೆ ಸಿಗಲಿದೆ.
ಇಂದು ಸಚಿವ ಸಂಪುಟ ಸಭೆಯಲ್ಲಿ ಋತುಚಕ್ರ ರಜೆ ನೀತಿ 2025 ಕ್ಕೆ ಅನುಮೋದನೆ ನೀಡಲಾಗಿದೆ. ಅದರಂತೆ ರಾಜ್ಯದ ಸರ್ಕಾರೀ ಕಚೇರಿಗಳು, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪನಿಗಳು, ಐಟಿ, ಖಾಸಗಿ ಕೈಗಾರಿಕಾ ವಲಯಗಳಲ್ಲಿ ಮುಟ್ಟಿನ ರಜೆ ನೀಡಬೇಕು ಎಂದು ಸಂಪುಟ ಸಭೆ ಬಳಿಕ ಸಚಿವ ಎಚ್ ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
ಕಳೆದ ಒಂದು ವರ್ಷದಿಂದ ಈ ನಿಯಮ ಜಾರಿಗೆ ತರಲು ಪ್ರಯತ್ನ ನಡೆಸಿದ್ದೆವು. ಮಹಿಳೆಯರು ಉದ್ಯೋಗದ ಜೊತೆ ಮನೆಯನ್ನೂ ನಿಭಾಯಿಸುತ್ತಾರೆ. ಮುಟ್ಟಿನ ಸಮಯದಲ್ಲಿ ಅವರು ಮಾನಸಿಕ ಒತ್ತಡ ಅನುಭವಿಸುತ್ತಾರೆ. ಹೀಗಾಗಿ ಮುಟ್ಟಿನ ರಜೆ ನೀಡುವ ಬಗ್ಗೆ ಪರಾಮರ್ಶೆ ನಡೆಸಲು ಸಮಿತಿ ರಚಿಸಿದ್ದೆವು.
ಅದರಂತೆ ಈಗ ವಾರ್ಷಿಕವಾಗಿ 12 ದಿನ ಮಹಿಳೆಯರಿಗೆ ಮುಟ್ಟಿನ ರಜೆ ಸಿಗಲಿದೆ. ಇದು ವೇತನಾ ಸಹಿತ ಎನ್ನುವುದು ಗಮನಿಸಬೇಕಾದ ಅಂಶ. ದೇಶದಲ್ಲಿ ಮೊದಲ ಬಾರಿಗೆ ಮುಟ್ಟಿನ ರಜೆ ಜಾರಿಗೊಳಿಸಿದ ರಾಜ್ಯ ಎಂದರೆ ಬಿಹಾರ. ಇದೀಗ ಉತ್ತರ ಪ್ರದೇಶ, ಮಹಾಅರಾಷ್ಟ್ರ, ಕೇರಳದಲ್ಲಿ ಈ ನಿಯಮವಿದೆ. ಇದೀಗ ಕರ್ನಾಟಕದಲ್ಲೂ ಈ ನಿಯಮ ಜಾರಿಗೆ ತರಲಾಗಿದೆ.