ಲೋಕಸಭೆ ಚುನಾವಣೆ ಹಣಕ್ಕಾಗಿ ಕಾಂಗ್ರೆಸ್ ನಿಂದ ರಸ್ತೆ ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ: ಬಿಜೆಪಿ ಆರೋಪ

Krishnaveni K

ಶನಿವಾರ, 20 ಜುಲೈ 2024 (15:15 IST)
ಬೆಂಗಳೂರು: ಬಿಬಿಎಂಪಿಯಲ್ಲಿ ಲೋಕಸಭಾ ಚುನಾವಣೆಗೆ ಹಣ ಸಂಗ್ರಹಿಸಲು ರಸ್ತೆ ಕಾಮಗಾರಿಯ ದೊಡ್ಡ ಹಗರಣ ನಡೆಸಿದ್ದಾರೆ ಎಂದು ಮಾಜಿ ಉಪ ಮಹಾಪೌರ ಮತ್ತು ಬಿಜೆಪಿ ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್ ಹರೀಶ್ ಅವರು ಆರೋಪಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಲೋಕಸಭಾ ಚುನಾವಣೆಗೂ ಮೊದಲು 2 ಸಾವಿರ ಕೋಟಿಯ ಟೆಂಡರ್ ಪ್ರಕ್ರಿಯೆ ಆರಂಭಿಸಿದ್ದರು. ಫೆಬ್ರವರಿ 5ರಂದು ಟೆಂಡರ್ ಕರೆದಿದ್ದು, ಫೆ. 17 ಆಗಿತ್ತು. ಫೆ. 21ರಂದು ಟೆಂಡರ್ ತೆರೆಯುವುದಾಗಿ ಹೇಳಿದ್ದರು. ಫೆ. 22ರಂದು ತಾಂತ್ರಿಕ ಮೌಲ್ಯಮಾಪನ ಸಮಿತಿಯಲ್ಲಿ ಚರ್ಚಿಸಿ ಅವತ್ತೇ ಅನುಮೋದನೆ ಕೊಟ್ಟಿದ್ದರು ಎಂದು ವಿವರಿಸಿದರು.

ಅದೇ 23ರಂದು ಆರ್ಥಿಕ ಮೌಲ್ಯಮಾಪನ ಮಾಡಿ, ಅನುಮೋದನೆ ನೀಡಿದ್ದರು. 16ರಂದು ನೀತಿ ಸಂಹಿತೆ ಜಾರಿಯಾಗಿತ್ತು. ಮಾರ್ಚ್ 15ರೊಳಗೆ ಎಲ್ಲ ಟೆಂಡರ್‍ಗಳ ಕಾಮಗಾರಿ ಮಾಡುವಂತೆ ಎಲ್ಲ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿದ್ದಾರೆ. ಚುನಾವಣಾ ಹಣಕ್ಕಾಗಿ 15ರ ವರೆಗೆ ಕಾದಿದ್ದರು ಎಂದು ಆರೋಪಿಸಿದರು.
ಬೊಮ್ಮಾಯಿಯವರು ಸಿಎಂ ಆಗಿದ್ದಾಗ ಬೆಂಗಳೂರಿಗೆ 6 ಸಾವಿರ ಕೋಟಿ ಬಿಡುಗಡೆ ಮಾಡಿದ್ದರು. ರಸ್ತೆ ಡಾಂಬರೀಕರಣ, ಫುಟ್‍ಪಾತ್ ಸರಿಮಾಡುವುದು, ರಸ್ತೆಗಳ ಸಮಗ್ರ ಅಭಿವೃದ್ಧಿಯ ಉದ್ದೇಶವಿತ್ತು. ಪ್ರತಿ ಕ್ಷೇತ್ರಕ್ಕೂ 25ರಿಂದ 30 ಕೋಟಿ, 50 ಕೋಟಿ, 100- 150 ಕೋಟಿ ಕೊಟ್ಟಿದ್ದರು. ಈ ಎಲ್ಲ ಕಾಮಗಾರಿಗಳು ಮುಗಿದು ಕೆಲವು ಬಿಲ್ ಪಾವತಿ ಆಗಿತ್ತು. ಹಲವು ಕಾಮಗಾರಿ ಪ್ರಗತಿಯಲ್ಲಿವೆ. ಇನ್ನೂ ಕೆಲವು ಬಿಲ್ ಪಾವತಿ ಆಗಿರಲಿಲ್ಲ ಎಂದು ವಿವರ ನೀಡಿದರು.

ನಮ್ಮಲ್ಲಿ ಟಿವಿಸಿಸಿ ಸೆಲ್ ಇದೆ. ಗುತ್ತಿಗೆದಾರರಿಗೆ ಹಣ ಪಾವತಿಗೆ ಮೊದಲು ಇದೇ ಟಿವಿಸಿಸಿಯವರು ಪರಿಶೀಲಿಸಿ ದೃಢೀಕರಣ ಪತ್ರ ನೀಡುತ್ತಾರೆ. ಆ ಬಳಿಕ ಹಣ ಪಾವತಿ ಮಾಡುತ್ತಾರೆ. ಇತ್ತೀಚೆಗೆ ಕಾಮಗಾರಿ ಆದ ರಸ್ತೆಯ ವೈಟ್ ಟಾಪಿಂಗ್ ಗೆ ಮುಂದಾಗಿದ್ದಾರೆ. ಹಿಂದಿನ ಹಣವೇ ಪಾವತಿ ಆಗಿಲ್ಲ. ಅದರ ಮೇಲೆ ವೈಟ್ ಟಾಪಿಂಗ್ ನಡೆದರೆ ಟಿವಿಸಿಸಿಯವರು ಹೇಗೆ ಸರ್ಟಿಫಿಕೇಟ್ ಕೊಡಲು ಸಾಧ್ಯ, ಹೇಗೆ ಹಣ ಪಾವತಿ ಸಾಧ್ಯ ಎಂದು ಕೇಳಿದರು.

ಗುಂಡಿ ಬೀಳದ, ರೋಡ್ ಕಟ್ಟಿಂಗ್ ಆಗದೆ ಚೆನ್ನಾಗಿರುವ ರಸ್ತೆಗಳನ್ನೇ ಆಯ್ಕೆ ಮಾಡಿದ್ದಾರೆ. ಗುಂಡಿ- ಹಳ್ಳವಿರುವ ರಸ್ತೆಗಳಿದ್ದರೂ ಅದರ ಕಾಮಗಾರಿ ಮಾಡಿಲ್ಲ. ಡಿಎಲ್‍ಪಿ ಅವಧಿ ಮುಗಿಯದ ರಸ್ತೆಗಳನ್ನೂ ಆಯ್ಕೆ ಮಾಡಿಕೊಂಡಿದ್ದಾರೆ. ಟೆಂಡರ್ ಶೂರ್ ರಸ್ತೆಗಳನ್ನೂ ಪರಿಗಣಿಸಿದ್ದಾರೆ ಎಂದು ಆಕ್ಷೇಪಿಸಿದರು. 2018-19ರಲ್ಲಿ ಕಾರ್ಯಾದೇಶ ನೀಡಿದ್ದ ರಸ್ತೆಗಳನ್ನೇ ಪರಿಗಣಿಸಿದ್ದಾರೆ. ಗುತ್ತಿಗೆದಾರರು ಹತ್ತಾರು ಕೋಟಿ ಇಎಂಡಿ ಮೊತ್ತ ಕಟ್ಟಿದ್ದ ರಸ್ತೆಯನ್ನೇ ಆರಿಸಿದ್ದಾರೆ ಎಂದು ಟೀಕಿಸಿದರು. ಹಿಂದಿನವರಿಗೆ ಕಾರ್ಯಾದೇಶ ರದ್ದು ಮಾಡಿ ಸೂಚನೆ ಕೊಟ್ಟಿರಲಿಲ್ಲ ಎಂದರು.

ಲೋಕಸಭಾ ಚುನಾವಣೆಗೆ ದುಡ್ಡಿನ ಅವಶ್ಯಕತೆ ಇದ್ದುದರಿಂದ ಏಜೆಂಟ್, ಮಿಡ್ಲ್‍ಮೆನ್, ಕಲೆಕ್ಷನ್ ಏಜೆಂಟ್ ಎನ್ನಲಾದ, ಮುಖ್ಯವಾಗಿ ಕಮೀಷನರ್ ತುಷಾರ್ ಗಿರಿನಾಥ್, ಎಂಜಿನಿಯರಿಂಗ್ ಚೀಫ್- ಚೀಫ್ ಎಂಜಿನಿಯರ್ ಪ್ರಹ್ಲಾದ್, ಲೋಕೇಶ್ ಅವರ ಮೂಲಕ ಇದು ನಡೆದಿದೆ. ಹಿಂದಿನ ಕಾರ್ಯಾದೇಶ ರದ್ದು ಮಾಡಿದ್ದರೆ ಸಂಪುಟದ ಅನುಮತಿ ಬೇಕಾಗಿತ್ತು. ಆದರೆ, ಯಾವುದೇ ಅನುಮತಿ ಪಡೆದಿರಲಿಲ್ಲ ಎಂದು ಟೀಕಿಸಿದರು.

ಕಾಯ್ದೆ ಉಲ್ಲಂಘಿಸಿ ಒಂದು ಸಿಂಗಲ್ ಟೆಂಡರ್ ಕೊಟ್ಟಿದ್ದಾರೆ. ಮಂಗಳೂರಿನಲ್ಲಿ ಸ್ಪರ್ಧಿಸಿದ್ದ ಮೊಹಿಯುದ್ದೀನ್ ಬಾವ ಅವರ ತಮ್ಮ ಸೈಫುದ್ದೀನ್‍ರಿಗೆ ಸೇರಿದ ಓಶಿಯನ್ ಕಂಪೆನಿಗೆ ಸಿಂಗಲ್ ಟೆಂಡರ್ ಕೊಟ್ಟಿದ್ದಾರೆ. ಚೀಫ್ ಎಂಜಿನಿಯರ್ ಪ್ರಹ್ಲಾದ್ ಅವರೇ ಈ ನೋಟ್ ಹಾಕಿ ಮಂಜೂರಾತಿ ಕೊಟ್ಟಿದ್ದಾರೆ. ಬಳಿಕ ಅವರೇ ಎಂಜಿನಿಯರಿಂಗ್ ಚೀಫ್ ಆಗಿ ಅನುಮೋದಿಸಿದೆ ಎಂದು ಬರೆದಿದ್ದಾರೆ. 2018-19ರ ಟೆಂಡರ್ ರದ್ದು ಮಾಡದೆ, ಯಾರೋ ಒಬ್ಬರ ಓಲೈಕೆಗೆ ಸಿಂಗಲ್ ಟೆಂಡರ್ ಕೊಟ್ಟಿದ್ದಾರೆ. ಬೇರೆಯವರಿಗೂ ಹಾಗೇ ಮಾಡಬೇಕಿತ್ತಲ್ಲವೇ ಎಂದು ಕೇಳಿದರು. ಹರಾಜಿನ ನಾಟಕ ಮಾಡುವ ಅವಶ್ಯಕತೆ ಇರಲಿಲ್ಲ ಅಲ್ಲವೇ ಎಂದು ಪ್ರಶ್ನಿಸಿದರು.

25 ಕೋಟಿಗೂ ಹೆಚ್ಚು ಮೊತ್ತದ ಕಾಮಗಾರಿಯು ನಿರ್ದಿಷ್ಟ ತಾಂತ್ರಿಕ ಸಮಿತಿ ಮುಂದೆ ಹೋಗಬೇಕೆಂದು ಸೂಚನೆ ಇದೆ. ಆದರೆ, ಆ ಸಮಿತಿಯನ್ನೇ ವಿಸರ್ಜಿಸಿದ್ದಾರೆ. ಇವರೇ ತಾಂತ್ರಿಕ ಸಮಿತಿ ಮಾಡಿಕೊಂಡು, ಪ್ರಹ್ಲಾದ್ ಸೂತ್ರಧಾರಿ ಆಗಿದ್ದುಕೊಂಡು ಅವರೇ ಅನುಮೋದಿಸುತ್ತಾರೆ. ಇದು

ಏಕಪಾತ್ರಾಭಿನಯವಾಗಿದ್ದು, ಮೊನ್ನೆ ಡಿಸಿಎಂ ಅವರು ಚಾಲನೆ ಕೊಟ್ಟಿದ್ದಾರೆ ಎಂದು ದೂರಿದರು.
ತರಾತುರಿಯಲ್ಲಿ ಟೆಂಡರ್ ಮಾಡಿದ್ದೇಕೆ? ಪ್ರಕೃತಿ ವಿಕೋಪ ಇದ್ದರೆ ಟೆಂಡರ್ ಅವಧಿಯನ್ನು ಸ್ವಲ್ಪ ಕಡಿಮೆ ಮಾಡಬಹುದು. ಇದೊಂದು ದೊಡ್ಡ ಹಗರಣ. ಇದನ್ನು ಲೋಕಾಯುಕ್ತಕ್ಕೂ ಕೊಡುತ್ತೇವೆ ಎಂದರಲ್ಲದೆ, ಗುತ್ತಿಗೆದಾರರಿಗೆ ವಕ್ ಡನ್ ಸರ್ಟಿಫಿಕೇಟ್ ಕೊಟ್ಟದ್ದೆಲ್ಲವೂ ನಕಲಿ ಎಂದು ಆರೋಪಿಸಿದರು.

ಲೋಕಸಭಾ ಚುನಾವಣೆಗೆ ಬಿಬಿಎಂಪಿಯಲ್ಲಿ ವಿನೂತನ ಮಾದರಿಯ ತಯಾರಿ ನಡೆದಿತ್ತು. ಪ್ರಪಂಚದಲ್ಲಿ 8 ಅದ್ಭುತಗಳಿದ್ದರೆ, ಬಿಬಿಎಂಪಿಯಲ್ಲಿ 10ರಿಂದ 12 ಅದ್ಭುತಗಳಿವೆ. ಅದರಲ್ಲಿ ಒಂದು ಅದ್ಭುತ ಇಲ್ಲಿದೆ ಎಂದು ವಿವರಿಸಿದರು. ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಮಾಜಿ ಮಹಾಪೌರರಾದ  ಗೌತಮ್ ಕುಮಾರ್, ಪ್ರಮುಖರು ಹಾಜರಿದ್ದರು.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ