ಬಿ ಶ್ರೀರಾಮುಲು ಹಳೇ ಹಗರಣ ಪ್ರಸ್ತಾಪಿಸಿ ಬಿಜೆಪಿಗೆ ರಾಜ್ಯ ಕಾಂಗ್ರೆಸ್ ತಿರುಗೇಟು

Krishnaveni K

ಶನಿವಾರ, 13 ಜುಲೈ 2024 (16:40 IST)
ಬೆಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರದ ಮೇಲೆ ಮುಡಾ ಹಗರಣ ಮತ್ತು ವಾಲ್ಮೀಕಿ ಹಗರಣದ ಬಗ್ಗೆ ಬಿಜೆಪಿ ತೀವ್ರ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್ ಘಟಕ ತಿರುಗೇಟು ನೀಡುವ ಪ್ರಯತ್ನ ಮಾಡಿದೆ. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಬಿ ಶ್ರೀರಾಮುಲು ಸಾರಿಗೆ ಸಚಿವರಾಗಿದ್ದ ನಡೆದಿದ್ದ ಹಗರಣದ ಬಗ್ಗೆ ರಾಜ್ಯ ಕಾಂಗ್ರೆಸ್ ಪತ್ರಿಕಾ ಪ್ರಕಟಣೆ ಮೂಲಕ ತಿರುಗೇಟು ನೀಡಿದೆ.


ಕರ್ನಾಟಕ ರಾಜ್ಯ ಸಾರಿಗೆ ಇಲಾಖೆಯು ಸಾರ್ವಜನಿಕ ಸೇವೆಯ ಒಂದು ಪ್ರಮುಖ ಸಂಸ್ಥೆಯಾಗಿದ್ದು, ಸೇವಾ ಮನೋಭಾವದಲ್ಲಿ ಕೆಲಸ ಮಾಡುತ್ತಿದೆ. ನಮ್ಮ ಸಾರಿಗೆ ಸಂಸ್ಥೆಯು ದೇಶದಲ್ಲಿ ಒಂದು ಉತ್ತಮ ಮತ್ತು ಅಗ್ರಮಾನ್ಯ ಸಾರಿಗೆ ಸಂಸ್ಥೆಯಾಗಿದ್ದು, ಗುಣಮಟ್ಟದ ಸಾರಿಗೆ ವ್ಯವಸ್ಥೆಯನ್ನು ನೀಡುತ್ತಿದೆ.  ಸಾಮಾಜಿಕ ಹೊಣೆಗಾರಿಕೆಯ ಅಡಿಯಲ್ಲಿ ಕರ್ನಾಟಕದ ಈಗಿನ ಕಾಂಗ್ರೆಸ್ ಸರ್ಕಾರ ಸಾರಿಗೆ ಇಲಾಖೆ ಮೂಲಕ  ರಾಜ್ಯದಲ್ಲಿ ಮಹಿಳೆಯರಿಗಾಗಿ ಜಾರಿಗೊಳಿಸಿರುವ ಉಚಿತ ಪ್ರಯಾಣದ ಶಕ್ತಿ ಯೋಜನೆಯು ಒಂದು ಐತಿಹಾಸಿಕ ಯೋಜನೆಯಾಗಿರುತ್ತದೆ. 

ರಾಜ್ಯ ಸರ್ಕಾರದ ಸಾರಿಗೆ ಇಲಾಖೆ ಅಡಿಯಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ , ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಡಿ.ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಲಿಮಿಟೆಡ್ ಕಾರ್ಯ ನಿರ್ವಹಿಸುತ್ತಿವೆ. 1980 ರಲ್ಲಿ ಕಂಪನಿ ಕಾಯಿದೆ ಅಡಿಯಲ್ಲಿ ರಾಜ್ಯ ಸರ್ಕಾರದ ಉದ್ಯಮವಾಗಿ  ಸ್ಥಾಪನೆಯಾದ ಕರ್ನಾಟಕ ಟ್ರಕ್ಸ್ ಅಂಡ್ ಟರ್ಮಿನಲ್ಸ್ ಸಂಸ್ಥೆಯು 1991 ರಲ್ಲಿ ಡಿ.ದೇವರಾಜ್ ಅರಸ್ ಟ್ರಕ್ ಅಂಡ್ ಟರ್ಮಿನಲ್ಸ್ ಹೆಸರಿನಲ್ಲಿ ಪರಿವರ್ತನೆಗೊಂಡು ವಾಣಿಜ್ಯ ಚಟುವಟಿಕೆಗಳನ್ನು ನಡೆಸುತ್ತಿದೆ.  ಇಂತಹ ಸಂಸ್ಥೆಯಲ್ಲಿ ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ 47 ಕೋಟಿ  ರೂಪಾಯಿಗಳ ಅವ್ಯವಹಾರ ನಡೆದಿದ್ದು, ಈ ಪ್ರಕರಣವನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ಸಿಐಡಿ ತನಿಖೆಗೆ ಒಳಪಡಿಸಿರುತ್ತದೆ. 

ಕರ್ನಾಟದ  ಹಿಂದಿನ ಬಿಜೆಪಿ ಸರ್ಕಾರದಲ್ಲಿ ಮಾಜಿ ಸಚಿವ ಶ್ರೀರಾಮುಲುರವರು ಸಮಾಜ ಕಲ್ಯಾಣ ಸಚಿವರಾಗಿ ಮತ್ತು ಸಾರಿಗೆ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸಿರುತ್ತಾರೆ. ಇವರು ಸಾರಿಗೆ ಸಚಿವರಾಗಿದ್ದ ಅವಧಿಯಲ್ಲೇ ದೇವರಾಜ್ ಅರಸ್ ಟ್ರಕ್ ಅಂಡ್ ಟರ್ಮಿನಲ್ ನಲ್ಲಿ 47 ಕೋಟಿ  ಹಗರಣ ನಡೆದಿದ್ದು, ಹಗರಣದ ತನಿಖೆ ಕೋರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರು 29-03-2023  ರಲ್ಲಿ ಸರ್ಕಾರಕ್ಕೆ ಸುಧೀರ್ಘವಾದ ಪತ್ರವನ್ನು ಬರೆದಿರುತ್ತಾರೆ. 13-01-2023  ರಲ್ಲಿ ಮತ್ತು 20-02-2023 ರಲ್ಲಿ ಸಾರಿಗೆ ಸಚಿವರನ್ನು ಭೇಟಿ ಮಾಡಿ ಭ್ರಷ್ಟಾಚಾರ ತಡೆ ಕಾಯಿದೆ ಅಡಿ ಪ್ರಕರಣದ ವಿಚಾರಣೆ ಮಾಡಲು ಸಾರಿಗೆ ಸಚಿವರನ್ನು ಕೋರಿರುತ್ತಾರೆ. ಈ ಸಂದರ್ಭದಲ್ಲಿ ಬಿಜೆಪಿ ಮಾಜಿ ಶಾಸಕರಾದ ಶ್ರೀ ಡಿ.ಎಸ್ ವೀರಯ್ಯನವರು ದೇವರಾಜ್ ಅರಸ್ ಟ್ರಕ್ ಅಂಡ್ ಟರ್ಮಿನಲ್ ಸಂಸ್ಥೆಯ ಅಧ್ಯಕ್ಷರಾಗಿ ಬಿಜೆಪಿಯಿಂದ ನೇಮಕಗೊಂಡು ಕೆಲಸ ಮಾಡುತ್ತಿದ್ದರು.  ಸಂಸ್ಥೆಯ ಪರಮ ಭ್ರಷ್ಟಾಚಾರ ಲಿಖಿತವಾಗಿ ತಮ್ಮ ಗಮನಕ್ಕೆ ಬಂದರೂ ಅಂದಿನ ಸಾರಿಗೆ ಸಚಿವರಾದ  ಶ್ರೀರಾಮುಲುರವರು ಮೌನಕ್ಕೆ ಶರಣಾದ ಹಿನ್ನೆಲೆ ಏನು?

ಸಾರಿಗೆ ಇಲಾಖೆಯ ಕಾರ್ಯದರ್ಶಿಗಳ ಮುಖಾಂತರ 47 ಕೋಟಿ  ರೂಪಾಯಿಗಳ ಅವ್ಯವಹಾರದ ತನಿಖೆಗೆ ಆದೇಶ ಕೋರಿ ಮಂಡನೆಯಾದ ಕಡತಕ್ಕೆ ಯಾವ ಕಾರಣಕ್ಕೆ ಶ್ರೀರಾಮುಲು ರವರು ಒಪ್ಪಿಗೆ ನೀಡಲಿಲ್ಲ? ರಾಜ್ಯ ಸರ್ಕಾರದ ಒಂದು ಸಾರ್ವಜನಿಕ ಉದ್ಯಮದಲ್ಲಿ ಇಂತಹ ಬ್ರಹ್ಮಾಂಡ ಭ್ರಷ್ಟಾಚಾರದ ಕಡತವು ದಾಖಲೆ ಸಮೇತ ಮತ್ತು ಲೆಕ್ಕ ಪರಿಶೋಧನಾ ಇಲಾಖೆಯ ವರದಿಯ ಸಹಿತವಾಗಿ ಸಾರಿಗೆ ಸಚಿವರ ಗಮನಕ್ಕೆ ಬಂದರೂ, ಸರ್ಕಾರದ /ಸಾರ್ವಜನಿಕ ಆಸ್ತಿಯನ್ನು ಸಂರಕ್ಷಣೆ ಮಾಡಲು ಮತ್ತು ಭ್ರಷ್ಟಾಚಾರವನ್ನು ಬಯಲು ಮಾಡಲು ಅಂದಿನ ಸಾರಿಗೆ ಸಚಿವರಾದ ಶ್ರೀರಾಮುಲುರವರು ಏತಕ್ಕೆ ಮುಂದಾಗಲಿಲ್ಲ? ಈ ಹಗರಣದಲ್ಲಿ ಇವರೂ ಷಾಮೀಲಾಗಿದ್ದರೆ ಅಥವಾ ಸ್ವಜನ ಪಕ್ಷಪಾತದಲ್ಲಿ ಸಿಲುಕಿದ್ದರೆ ? 

ದೇವರಾಜ್ ಅರಸ್ ಟ್ರಕ್ ಅಂಡ್ ಟರ್ಮಿನಲ್ ನಲ್ಲಿ ಮೇಲ್ನೋಟಕ್ಕೆ 47 ಕೋಟಿ ರೂಪಾಯಿಗಳ ಅವ್ಯವಹಾರ ಮತ್ತು ದುರುಪಯೋಗ ಕಾಣುತ್ತಿದ್ದು, ಇಲ್ಲಿಯೂ  ಸುಮಾರು  200 ಕೋಟಿ  ರೂಪಾಯಿಗಳಿಗೂ ಹೆಚ್ಚು ಅವ್ಯವಹಾರ ನಡೆದಿರುವ ಸಾದ್ಯತೆಗಳಿರುತ್ತದೆ. ಟ್ರಕ್ ಅಂಡ್ ಟರ್ಮಿನಲ್ ಸಂಸ್ಥೆಯ 47 ಕೋಟಿ  ಹಗರಣದಲ್ಲಿ ಹಣವು ನೇರವಾಗಿ ಕೇವಲ ಮೂರು ಸಂಸ್ಥೆಗಳಿಗೆ ಪಾವತಿ ಆಗಿರುತ್ತದೆ. ಈಗ ನಡೆಯುತ್ತಿರುವ ಸಿಐಡಿ ತನಿಖೆ ಮತ್ತು ಲೋಕಾಯುಕ್ತ ವಿಚಾರಣೆಯಲ್ಲಿ ಈ ಅವ್ಯವಹಾರದ ಆಳ ಮತ್ತು ಅಗಲ ಬಹಿರಂಗವಾಗಬೇಕಾಗಿದೆ.

ಒಬ್ಬ ಮಾಜಿ ಸಚಿವರಾಗಿ ಮತ್ತು ಬಿಜೆಪಿ ನಾಯಕರಾಗಿ ಕಾಂಗ್ರೆಸ್ ಪಕ್ಷದ ಮೇಲೆ ಟೀಕೆ ಮಾಡುವ ಪ್ರತಿಭಟನೆ ಮಾಡುವ ಮಾಜಿ ಸಚಿವ ಶ್ರೀರಾಮುಲುರವರು ಟ್ರಕ್ ಅಂಡ್ ಟರ್ಮಿನಲ್ ಹಗರಣದಲ್ಲಿ ತಮ್ಮ ಪಾತ್ರದ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ನೀಡಬೇಕು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ಸಂಸ್ಥೆಯಲ್ಲಿ ನಡೆದಿರುವ ದೊಡ್ಡ ಮಟ್ಟದ ಭ್ರಷ್ಟಾಚಾರದಲ್ಲಿ ಬಿಜೆಪಿ ನಾಯಕರ ಪಾತ್ರವಿಲ್ಲವೇ? ಸಾರ್ವಜನಿಕರ ನಂಬಿಕೆಗೆ ಮೋಸವಾಗಿಲ್ಲವೇ? ಈ ಹಗರಣದ ನೈತಿಕತೆಯನ್ನು ಹೊತ್ತು ಮಾಜಿ ಸಚಿವ ರಾಜಕೀಯ ನಿವೃತ್ತಿಗೆ ಮುಂದಾಗುತ್ತಾರೆಯೇ? 
 
 23-09-2023 ರಲ್ಲಿ ಕ್ರೈಂ ಸಂಖ್ಯೆ.243/2023 ಮತ್ತು 14-02-2023  ರಲ್ಲಿ ಕ್ರೈಂ ಸಂಖ್ಯೆ 42/2023 ರಲ್ಲಿ ಬೆಂಗಳೂರಿನ ವಿಲ್ಸನ್ ಗಾರ್ಡ್ ಪೊಲೀಸ್ ಠಾಣೆಯಲ್ಲಿ ದೇವರಾಜ್ ಅರಸ್ ಟ್ರಕ್ ಅಂಡ್ ಟರ್ಮಿನಲ್ ನಲ್ಲಿ ನಡೆದಿರುವ 47 ಕೋಟಿ  ರೂಪಾಯಿಗಳ ಹಗರಣದಲ್ಲಿ ಕೇಸು ದಾಖಲಾಗಿರುತ್ತದೆ. ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ದೇವರಾಜ್ ಅರಸ್ ಟ್ರಕ್ ಅಂಡ್ ಟರ್ಮಿನಲ್ ಪ್ರಕರಣದ ತನಿಖೆಯನ್ನು ಸಿಐಡಿಗೆ ಹಸ್ತಾಂತರ  ಮಾಡಿರುತ್ತದೆ. 

21-06-2024 ರಲ್ಲಿ ಲೆಕ್ಕ ಪರಿಶೋಧನಾ ಇಲಾಖೆಯು ಆಡಿಟ್  ವರದಿಯನ್ನು ನೀಡಿದ್ದು, ಸಂಸ್ಥೆಯಲ್ಲಿ ನಡೆದಿರುವ ಅವ್ಯವಹಾರವನ್ನು ಬಹಿರಂಗಗೊಳಿಸಿರುತ್ತದೆ.  ಈ ಹಗರಣದಲ್ಲಿ ಆರೋಪಿಯಾದ ಹಿಂದಿನ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ನ್ಯಾಯಾಂಗ ಬಂಧನದಲ್ಲಿದ್ದು, 24-06-2024  ರಲ್ಲಿ ಬೆಂಗಳೂರಿನ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಬಂಧಿತ ಆರೋಪಿಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿರುತ್ತದೆ. ಈ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಬಿಜೆಪಿಯ  ಶ್ರೀ ಡಿ.ಎಸ್. ವೀರಯ್ಯನವರು ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯದ ಕದ ತಟ್ಟಿರುತ್ತಾರೆ. 

ನ್ಯಾಯಾಲಯವು ಇವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದು, ಪೊಲೀಸರು ತನಿಖೆಗಾಗಿ ಇವರನ್ನು ಬಂಧಿಸಿರುತ್ತಾರೆ. ಭಾರತೀಯ ಜನತಾ ಪಕ್ಷದ ಅಂದಿನ ಸರ್ಕಾರ ವೀರಯ್ಯನವರು ಅಧ್ಯಕ್ಷರಾಗಿ ನಡೆಸಿರಬಹುದಾದ ಅವ್ಯವಹಾರಗಳನ್ನು ಮುಚ್ಚಿ ಹಾಕಲು ಪ್ರಯತ್ನಿಸಿರುತ್ತದೆ. ಈ ಪ್ರಕರಣದಲ್ಲಿ ತಲೆಮಾರೆಸಿಕೊಂಸಿದ್ದ ಶ್ರೀ ಡಿ. ಎಸ್. ವೀರಯ್ಯನವರಿಗೆ ತಮಿಳುನಾಡಿನ ಬಿಜೆಪಿ ನಾಯಕರು ಆಶ್ರಯ ನೀಡಿದ್ದರು. ಅಲ್ಲದೆ ಈ ಪ್ರಕಾರಣವನ್ನು ಮುಚ್ಚಿ ಹಾಕಲು ತನಿಖಾ ಅಧಿಕಾರಿಗಳ ಮೇಲೆ ಪ್ರಭಾವ ಬೀರುವ ವ್ಯವಸ್ಥಿತ ಪ್ರಯತ್ನವನ್ನು ಬಿಜೆಪಿ ನಾಯಕರು ಮಾಡಿರುತ್ತಾರೆ. ಅಂದಿನ ಬಿಜೆಪಿ ಮುಖ್ಯಮಂತ್ರಿ ಶ್ರೀ ಬಸವರಾಜ್ ಬೊಮ್ಮಾಯಿ ಮತ್ತು ಸಾರಿಗೆ ಸಚಿವ ಶ್ರೀ
ಶ್ರೀರಾಮುಲು ರವರ ಮೂಗಿನ ಅಡಿಯಲ್ಲಿ ಈ ಹಗರಣ ನಡೆದಿದ್ದು ಬಿಜೆಪಿ ನಾಯಕರು ಶಾ ಮೀಲಾಗಿರುವುದು ನಿಚ್ಚುಲವಾಗಿರುತ್ತದೆ.  “ಮಾಡುವುದೆಲ್ಲ ಅನಾಚಾರ ಮನೆಯ ಮುಂದೆ ಬೃಂದಾವನ” ಎನ್ನುವ ಗಾದೆಯ ಮಾತಿನಂತೆ ಭಾರತೀಯ ಜನತಾ ಪಕ್ಷದ ನಾಯಕರು ತಾವು ಮಾಡಿರುವ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳಲು ನಿರಂತರವಾಗಿ ಸುಳ್ಳು ಹೇಳುತ್ತಾರೆ.  ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳನ್ನುಸಾರ್ವಜನಿಕ ಹಿತದೃಷ್ಟಿಯಿಂದ ಮತ್ತು ರಾಜ್ಯದ ಹಿತದೃಷ್ಟಿಯಿಂದ  ಬಯಲು ಮಾಡುವುದು  ಅನಿವಾರ್ಯವಾಗಿದೆ. 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ