ಮುಡಾ ಹಗರಣ ಹೋರಾಟ: ಬಿಜೆಪಿ ಪ್ರಮುಖ ನಾಯಕರ ಬಂಧನ

Krishnaveni K

ಶುಕ್ರವಾರ, 12 ಜುಲೈ 2024 (13:08 IST)
ಬೆಂಗಳೂರು: ಮೈಸೂರು ಮುಡಾ ಹಗರಣವನ್ನು ಖಂಡಿಸಿ ‘ಮೈಸೂರು ಚಲೋ’ ನಡೆಸಲು ನಗರದಿಂದ ಹೊರಟ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ಮಾಜಿ ಸಚಿವ ಮುನಿರತ್ನ, ಪಕ್ಷದ ಪ್ರಮುಖರು, ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.

ಪ್ರತಿಭಟನಾಕಾರರನ್ನು ತಡೆಯಲು ಪೊಲೀಸರು ಹರಸಾಹಸ ಮಾಡಿದರು. ಬೆಳಿಗ್ಗೆಯೇ ಬಿಜೆಪಿಯ ಕೆಲವು ನಾಯಕರ ಮನೆಯ ಮುಂದೆ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಈ ಬಗ್ಗೆ ಕರ್ನಾಟಕ ಬಿಜೆಪಿ ತೀವ್ರ ಟೀಕೆ ವ್ಯಕ್ತಪಡಿಸಿತ್ತು. ನಮ್ಮನ್ನು ಹತ್ತಿಕ್ಕಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಆರೋಪಿಸಿತ್ತು.

ಪ್ರತಿಭಟನೆಯನ್ನು ಹತ್ತಿಕ್ಕುವ ಕೆಲಸ ಇದು ಎಂದು ಇದೇವೇಳೆ ವಿಜಯೇಂದ್ರ ಅವರು ಟೀಕಿಸಿದರು. ಕಾರ್ಯಕರ್ತರು ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಕೂಗಿದರು. ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ನೂಕಾಟ, ತಳ್ಳುವಿಕೆ ನಡೆಯಿತು.

ಹೋರಾಟವನ್ನು ಹತ್ತಿಕ್ಕುವ ಏಕೈಕ ಉದ್ದೇಶದಿಂದ ಈ ಸರಕಾರವು ಇಂದು ಬೆಳಗ್ಗೆ 7 ಗಂಟೆಗೇ ನಮ್ಮ ಮುಖಂಡರನ್ನು ಬಂಧಿಸಿದೆ. ನೈಸ್ ರಸ್ತೆ ಬಳಿ ನಮ್ಮ ಬ್ಯಾನರ್, ಬಾವುಟಗಳನ್ನು ಕಿತ್ತು ಬಿಸಾಕಿ, ಕಾರ್ಯಕರ್ತರಿಗೆ ಕೊಡಲು ತಂದ ತಿಂಡಿಯನ್ನೂ ಒದ್ದು ಬಿಸಾಕಿದ್ದಾರೆ ಎಂದು ವಿಜಯೇಂದ್ರ ಅವರು ಆಕ್ಷೇಪ ವ್ಯಕ್ತಪಡಿಸಿದರು.
 
 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ