ಮೈಸೂರು: ಮುಡಾ ಹಗರಣ ಮತ್ತು ವಾಲ್ಮೀಕಿ ನಿಗಮ ಹಗರಣ ಕುರಿತಂತೆ ರಾಜ್ಯ ಸರ್ಕಾರದ ವಿರುದ್ಧ ಇಂದು ಭಾರೀ ಪ್ರತಿಭಟನೆಗೆ ಮುಂದಾಗಿರುವ ನಮ್ಮ ನಾಯಕರ ಮನೆ ಮುಂದೆ ಪೊಲೀಸರಿಂದ ಸರ್ಪಗಾವಲು ಹಾಕಿಸಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ಬಿಜೆಪಿ ನಾಯಕರ ಮನೆ ಮುಂದೆ ಬೆಳಿಗ್ಗೆಯೇ ಖಾಕಿ ಪಡೆಯೇ ಬಂದು ನಿಂತಿದೆ. ಪ್ರತಿಭಟನೆ ಮಾಡಲು ಹೊರಟ ನಾಯಕರನ್ನು ಬಂಧಿಸಲಾಗಿದೆ. ಇದೆಲ್ಲಾ ಪ್ರತಿಭಟನೆ ಮಾಡಲು ಹೊರಟ ನಮ್ಮ ನಾಯಕರನ್ನು ಹತ್ತಿಕ್ಕಲು ರಾಜ್ಯ ಸರ್ಕಾರ ಮಾಡುತ್ತಿರುವ ತಂತ್ರ ಎಂದು ಬಿಜೆಪಿ ಆರೋಪಿಸಿದೆ.
ಮೈಸೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ವಿರುದ್ಧ ಬಿಜೆಪಿ ಮೈಸೂರಿನಲ್ಲೇ ಸಾವಿರಾರು ಕಾರ್ಯಕರ್ತರನ್ನು ಒಟ್ಟುಗೂಡಿಸಿ ಪ್ರತಿಭಟನೆಗೆ ಮುಂದಾಗಿತ್ತು. ಮೈಸೂರು ಅಭಿವೃದ್ಧಿ ಪ್ರಾಧಿಕಾರ ಕಚೇರಿಗೇ ಮುತ್ತಿಗೆ ಹಾಕಲು ಕಾರ್ಯಕರ್ತರು ತೀರ್ಮಾನಿಸಿದ್ದರು. ಆದರೆ ಇದಕ್ಕೆ ಕಾಂಗ್ರೆಸ್ ಕೂಡಾ ತಿರುಗೇಟು ನೀಡಲು ಸಜ್ಜಾಗಿದೆ. ಬಿಜೆಪಿ ಕಾರ್ಯಕರ್ತರಿಗೇ ನಾವು ಮುತ್ತಿಗೆ ಹಾಕುತ್ತೇವೆ ಎಂದಿತ್ತು.
ಇದರಿಂದ ಎರಡೂ ಪಕ್ಷದ ಕಾರ್ಯಕರ್ತರ ನಡುವೆ ಭಾರೀ ಸಂಘರ್ಷವೇರ್ಪಡುವ ಸಾಧ್ಯತೆಯಿತ್ತು. ಇದರ ಬೆನ್ನಲ್ಲೇ ಪೊಲೀಸರು ಬಿಜೆಪಿ ನಾಯಕರ ಮನೆ ಮುಂದೆ ಬಂದು ಪ್ರತಿಭಟನೆ ತಡೆಯುವ ಪ್ರಯತ್ನ ನಡೆಸಿದ್ದಾರೆ. ಅದೇನೇ ಇದ್ದರೂ ಇಂದು ಬಿಜೆಪಿ-ಕಾಂಗ್ರೆಸ್ ನಡುವೆ ಜಟಾಪಟಿ ನಡೆಯುವ ನಿರೀಕ್ಷೆಯಿದೆ.