ಸಿವಿಲ್ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ: ವೋಟ್ ಬ್ಯಾಂಕ್ ಗೆ ಕುತ್ತು ಬರುವ ಭೀತಿಯಲ್ಲಿ ಸರ್ಕಾರ ಯೂ ಟರ್ನ್

Krishnaveni K

ಮಂಗಳವಾರ, 12 ನವೆಂಬರ್ 2024 (12:15 IST)
ಬೆಂಗಳೂರು: ಸಿವಿಲ್ ಗುತ್ತಿಗೆ ಕಾಮಗಾರಿಗಳಲ್ಲಿ ಮುಸ್ಲಿಮ್ ಸಮುದಾಯದವರಿಗೆ ಶೇ.4 ರಷ್ಟು ಮೀಸಲಾತಿ ನೀಡುವ ಪ್ರಸ್ತಾವನೆಗೆ ಸಿಎಂ ಸಿದ್ದರಾಮಯ್ಯ ಅನುಮೋದನೆ ನೀಡಿರುವ ಬೆನ್ನಲ್ಲೇ ಸರ್ಕಾರ ಸ್ಪಷ್ಟನೆ ನೀಡಿದೆ.

ಸಿಎಂ ಸಿದ್ದರಾಮಯ್ಯ ಪ್ರಸ್ತಾವನೆಗೆ ಅನುಮೋದನೆ ನೀಡಿದ ವಿಚಾರವಾಗಿ ಬಿಜೆಪಿ ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದೆ. ಈ ವಿಚಾರ ಸಾರ್ವಜನಿಕವಾಗಿ ಚರ್ಚೆಗೆ ಕಾರಣವಾಗಬಹುದು ಮತ್ತು ನಾಳೆ ನಡೆಯಲಿರುವ ಉಪಚುನಾವಣೆ ಮೇಲೆ ಪರಿಣಾಮ ಬೀರಬಹುದು ಎಂದು ಅರಿತ ಸರ್ಕಾರ ಯೂ ಟರ್ನ್ ಹೊಡೆದಿದೆ.


ಉಪಚುನಾವಣೆಗೆ ಒಂದು ದಿನ ಬಾಕಿ ಇರುವಾಗ ಮುಸ್ಲಿಮ್ ಮೀಸಲಾತಿ ವಿವಾದ ಭುಗಿಲೇಳುವ ಲಕ್ಷಣಗಳು ಕಂಡುಬಂದ ಬೆನ್ನಲ್ಲೇ ಸಿಎಂ ಕಚೇರಿ ಇದಕ್ಕೆ ಸ್ಪಷ್ಟನೆ ನೀಡಿದೆ. ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಿ ಎಂದು ಮುಸ್ಲಿಂ ಸಮುದಾಯದ ಮುಖಂಡರಿಂದ ಬೇಡಿಕೆ ಮುಂದಿಡಲಾಗಿತ್ತು.

ಆದರೆ ರಾಜ್ಯ ಸರ್ಕಾರದ ಮುಂದೆ ಅಂತಹ ಯಾವುದೇ ಪ್ರಸ್ತಾವನೆ ಇಲ್ಲ. ಅಲ್ಪಸಂಖ್ಯಾತ ಇಲಾಖೆ, ಸಚಿವರು, ಶಾಸಕರು ನೀಡಿದ ಪ್ರಸ್ತಾವನೆಗೆ ಸಿಎಂ ಸಹಿ ಹಾಕಿ ಕಡತ ಮಂಡಿಸಲು ಸೂಚಿಸಿದ್ದಾರಷ್ಟೇ ಎಂದು ಸ್ಪಷ್ಟನೆ ನೀಡಿದೆ. ಚಳಿಗಾಲದ ಅಧಿವೇಶನದಲ್ಲಿ ತಿದ್ದುಪಡಿ ಮಂಡನೆಯಾಗಲಿದೆ ಎಂದು ಸುದ್ದಿಗಳಿತ್ತು.

ಆದರೆ ಈಗ ನಾಳೆ ನಡೆಯಲಿರುವ ಉಪಚುನಾವಣೆಯಲ್ಲಿ ಮತಕ್ಕೆ ಕುತ್ತು ಬೀಳುವುದೋ ಎಂದು ಭಯ ಬಿದ್ದ ಸರ್ಕಾರ ಈಗ ಯೂ ಟರ್ನ್ ಹೊಡೆದಿದ್ದು, ವಿವಾದಕ್ಕೆ ತೇಪೆ ಹಚ್ಚುವ ಕೆಲಸ ಮಾಡಿದೆ. ಸಚಿವ ಜಮೀರ್ ಅಹ್ಮದ್, ರಹೀಂ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಈ ಸಂಬಂಧ ಬೇಡಿಕೆ ಮಂಡಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ