ದೀಪಾವಳಿಗೆ ಖಾಸಗಿ ಬಸ್ ದರದ ಬಗ್ಗೆ ಎಚ್ಚರಿಕೆ ನೀಡಿದ ಸರ್ಕಾರ: ಕೆಎಸ್ಆರ್ ಟಿಸಿ ಬಸ್ ದರವೂ ಏನೂ ಕಮ್ಮಿಯಲ್ಲ

Krishnaveni K

ಶನಿವಾರ, 26 ಅಕ್ಟೋಬರ್ 2024 (08:22 IST)
ಬೆಂಗಳೂರು: ಈ ವಾರಂತ್ಯದಲ್ಲಿ ಬಸ್ ಪ್ರಯಾಣ ಭಾರೀ ದುಬಾರಿ. ದೀಪಾವಳಿ ಹಬ್ಬ ನಿಮಿತ್ತ ಸಾಲು ಸಾಲು ರಜೆಯಿರುವುದರಿಂದ ಬಸ್ ಗಳ ದರ ಗಗನಕ್ಕೇರಿದೆ.

ಬೆಂಗಳೂರಿನಿಂದ ಅನೇಕರು ತಮ್ಮ ಊರಿನ ಕಡೆ ಪ್ರಯಾಣ ಬೆಳೆಸುತ್ತಾರೆ. ಆದರೆ ಬಸ್ ಬುಕ್ ಮಾಡಲು ಹೋದರೆ ಅದರ ದರ ನೋಡಿಯೇ ಶಾಕ್ ಆಗುತ್ತಿದ್ದಾರೆ. ಸಾಲು ಸಾಲು ರಜೆಯಿದ್ದಾಗ ಖಾಸಗಿ ಬಸ್ ಗಳು ಅಕ್ಷರಶಃ ಲೂಟಿ ಮಾಡುತ್ತವೆ. ಹೀಗಾಗಿ ರಾಜ್ಯ ಸರ್ಕಾರ ಮೊದಲೇ ಖಾಸಗಿ ಬಸ್ ಗಳಿಗೆ ದರ ಮಿತಿಮೀರಿ ಹೆಚ್ಚಿಸದಂತೆ ಎಚ್ಚರಿಕೆ ನೀಡಿದೆ.

ಒಂದು ವೇಳೆ ಮಿತಿ ಮೀರಿ ದರ ನಿಗದಿಪಡಿಸಿದರೆ ಬಸ್ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ ನೀಡಿದೆ. ಖಾಸಗಿ ಬಸ್ ಗಳು ನಿಗದಿತ ದರಕ್ಕಿಂತ ಹೆಚ್ಚು ವಸೂಲಿ ಮಾಡುವುದು ಕಂಡರೆ ಸಾರ್ವಜನಿಕರು 9449863429 ಅಥವಾ 9449863426 ಸಂಖ್ಯೆಗೆ ಕರೆ ಮಾಡಿ ದೂರು ನೀಡಲು ಸೂಚಿಸಿದೆ.

ಆದರೆ ಖಾಸಗಿ ಬಸ್ ಗಳಿಗೆ ಎಚ್ಚರಿಕೆ ನೀಡಿರುವ ಸರ್ಕಾರ ಕೆಎಸ್ಆರ್ ಟಿಸಿ ಬಸ್ ದರದ ಕಡೆಗೂ ಗಮನ ಹರಿಸಿದರೆ ಒಳಿತು ಎಂಬ ಮಾತು ಸಾರ್ವಜನಿಕರಿಂದ ಕೇಳಿಬರುತ್ತಿದೆ. ಸಾಮಾನ್ಯವಾಗಿ 800 ರೂ. ದರ ಇರುವ ಟಿಕೆಟ್ ದರ 1,000 ರೂ. ಗಡಿ ದಾಟಿದೆ. ಸರಿ ಸುಮಾರು 100-150 ರೂ.ಗಳಷ್ಟು ಟಿಕೆಟ್ ದರ ಹೆಚ್ಚಾಗಿದೆ. ಒಂದೆಡೆ ಬಸ್ ಗಳಲ್ಲಿ ಸೀಟ್ ಗಳಿಲ್ಲ. ಇದರ ನಡುವೆ ದುಬಾರಿ ದರ ಬೇರೆ. ಸ್ಪೆಷಲ್ ಬಸ್ ಗಳನ್ನು ಹಾಕಿದರೆ ಅದರ ದರ ಮತ್ತಷ್ಟು ಹೆಚ್ಚು. ಹೀಗಾಗಿ ದೀಪಾವಳಿಯನ್ನು ಊರಿಗೆ ತೆರಳದೇ ಇಲ್ಲಿಯೇ ಆಚರಿಸುವುದು ಉತ್ತಮ ಎನ್ನುತ್ತಿದ್ದಾರೆ ಸಾರ್ವಜನಿಕರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ