ಕರ್ನಾಟಕದಲ್ಲಿ ಮಳೆ ಬಗ್ಗೆ ಹೊಸ ಮಾಹಿತಿ ಕೊಟ್ಟ ಹವಾಮಾನ ಇಲಾಖೆ: ಈ ದಿನದವರೆಗೂ ಮಳೆ ಗ್ಯಾರಂಟಿ

Krishnaveni K

ಗುರುವಾರ, 1 ಆಗಸ್ಟ್ 2024 (09:51 IST)
ಬೆಂಗಳೂರು: ಕರ್ನಾಟಕದಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಮಳೆಯ ಬಗ್ಗೆ ಹವಾಮಾನ ಇಲಾಖೆ ಲೇಟೆಸ್ಟ್ ಅಪ್ ಡೇಟ್ ಒಂದನ್ನು ನೀಡಿದೆ. ಇನ್ನೂ ಒಂದು ವಾರ ಮಳೆ ಗ್ಯಾರಂಟಿ ಎಂದು ವರದಿ ನೀಡಿದೆ.

ನಿನ್ನೆ ಹಲವು ದಿನಗಳ ನಂತರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಉತ್ತಮ ಮಳೆಯಾಗಿತ್ತು. ನಿನ್ನೆ ಸಂಜೆ ಸುರಿಯಲಾರಂಭಿಸಿದ್ದ ಮಳೆರಾಯ ರಾತ್ರಿವರೆಗೂ ಅಬ್ಬರಿಸಿದ್ದಾನೆ. ಪರಿಣಾಮ ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಯಿತು. ಕೆಲವೆಡೆ ಮನೆಗಳಿಗೂ ನೀರು ನುಗ್ಗಿದ ವರದಿಯಾಗಿದೆ.

ಇನ್ನು, ಕರಾವಳಿ ಜಿಲ್ಲೆ, ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಈಗಾಗಲೇ ನೆರೆ ಸದೃಶ ವಾತಾವರಣವಿದೆ. ಬಹುತೇಕ ಡ್ಯಾಮ್ ಗಳು ಭರ್ತಿಯಾಗಿದ್ದು ಜನರು ಪ್ರವಾಹದ ಭೀತಿಯಲ್ಲಿದ್ದಾರೆ.  ಇಂದೂ ಕೂಡಾ ಮೋಡ ಕವಿದ ವಾತಾವಾರಣವಿದ್ದು ಕರ್ನಾಟಕಾದ್ಯಂತ ಮಳೆಯಾಗುವ ನಿರೀಕ್ಷೆಯಿದೆ.

ಹವಾಮಾನ ಇಲಾಖೆ ವರದಿ ಪ್ರಕಾರ ಅಗಸ್ಟ್ 6 ರವರೆಗೂ ವರುಣನ ಅಬ್ಬರ ಮುಂದುವರಿಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೆಡ್ ಅಲರ್ಟ್, ಉಡುಪಿ, ಉತ್ತರ ಕನ್ನಡ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಮತ್ತು ಶಿವಮೊಗ್ಗ, ಬೆಳಗಾವಿ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ