ಶಾಸಕರ ಕಾವಲು ಕಾಯೋದೇ ಈಗ ನಾಯಕರ ಕೆಲಸ! ಬೆಳ್ಳಂ ಬೆಳಿಗ್ಗೆ ಎಂಟಿಬಿ ಮನೆ ಮುಂದೆ ಪ್ರತ್ಯಕ್ಷರಾದ ಡಿಕೆಶಿ
ಶನಿವಾರ, 13 ಜುಲೈ 2019 (10:18 IST)
ಬೆಂಗಳೂರು: ರಾಜ್ಯ ರಾಜಕೀಯ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದ್ದು, ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿ ಕೂಡಾ ಈಗ ರೆಸಾರ್ಟ್ ನಲ್ಲಿ ತಮ್ಮ ತಮ್ಮ ಪಕ್ಷದ ಶಾಸಕರನ್ನು ಕೂಡಿಟ್ಟು ಕಾವಲು ಕಾಯುವ ಕೆಲಸ ಶುರುವಾಗಿದೆ.
ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ತಮ್ಮ ಪಕ್ಷದ ಪರವಾಗಿಯೇ ಮತ ಹಾಕುವಂತೆ ನೋಡಿಕೊಳ್ಳುವ ಜವಾಬ್ಧಾರಿ ಜೆಡಿಎಸ್ ಮತ್ತು ಕಾಂಗ್ರೆಸ್ ನದ್ದಾದರೆ, ತಮ್ಮ ಪಕ್ಷದ ಶಾಸಕರು ಕೈ ಬಿಟ್ಟು ಹೋಗದಂತೆ ನೋಡಿಕೊಳ್ಳುವುದು ಬಿಜೆಪಿ ನಾಯಕರ ತಲೆನೋವಾಗಿದೆ.
ಹೀಗಾಗಿ ಮೂರೂ ಪಕ್ಷದ ಶಾಸಕರೂ ರೆಸಾರ್ಟ್ ಸೇರಿಕೊಂಡಿದ್ದಾರೆ. ಆಪರೇಷನ್ ಅಥವಾ ರಿವರ್ಸ್ ಆಪರೇಷನ್ ಆಗದಂತೆ ಸೋಮವಾರದವರೆಗೆ ಶಾಸಕರನ್ನು ಕಾವಲು ಕಾಯಬೇಕಿದೆ. ಈ ನಡುವೆ ತಮ್ಮ ಬಂಡಾಯ ಶಾಸಕರ ಮನ ಒಲಿಸುವ ಕೆಲಸದಲ್ಲಿ ಕಾಂಗ್ರೆಸ್ ನಾಯಕರು ಬ್ಯುಸಿಯಾಗಿದ್ದಾರೆ.
ಕಾಂಗ್ರೆಸ್ ನ ಟ್ರಬಲ್ ಶೂಟರ್ ಎಂದೇ ಎನಿಸಿಕೊಂಡಿರುವ ಡಿಕೆ ಶಿವಕುಮಾರ್ ಬೆಳ್ಳಂ ಬೆಳಿಗ್ಗೆಯೇ ಈಗಾಗಲೇ ರಾಜೀನಾಮೆ ನೀಡಿರುವ ಎಂಟಿಬಿ ನಾಗರಾಜ್ ಮನೆಗೆ ಹಾಜರಾಗಿದ್ದು, ಶಾಸಕರ ಮನ ಒಲಿಸುವ ಕೆಲಸ ಮಾಡಿದ್ದಾರೆ. ಇದೀಗ ಕಾಂಗ್ರೆಸ್ ನಾಯಕರಲ್ಲಿ ಬಂಡಾಯ ಶಾಸಕರ ಮನ ಒಲಿಸುವ ಕೆಲಸ ಜೋರಾಗಿದೆ. ಆದರೆ ಈ ತಂತ್ರಗಳು ಕೈ ಹಿಡಿಯುತ್ತಾ? ಸರ್ಕಾರ ವಿಶ್ವಾಸ ಮತದಲ್ಲಿ ಗೆಲ್ಲುತ್ತಾ ಎಂಬುದೇ ಸದ್ಯದ ಕುತೂಹಲ.