ಶಾಸಕನ ರಾಜೀನಾಮೆಯಿಂದ ಜೆಡಿಎಸ್ ಗೆ ಗ್ರಹಣ ಬಿಟ್ಹೋಯ್ತಂತೆ

ಶುಕ್ರವಾರ, 12 ಜುಲೈ 2019 (17:46 IST)
ಅತೃಪ್ತ ಜೆಡಿಎಸ್ ಶಾಸಕ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಬಿಟ್ಟು ಹೋಗುತ್ತಿರುವುದರಿಂದ ಪಕ್ಷಕ್ಕೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆಯಂತೆ. 

ಶಾಸಕ ನಾರಾಯಣಗೌಡ ಉಂಡ ಮನೆಗೆ ಕೇಡು ಬಯಸುವ ದ್ರೋಹಿ. ನಯವಂಚಕ, ಪಕ್ಷದ್ರೋಹಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಬಿಟ್ಟು ಹೋಗುತ್ತಿರುವುದರಿಂದ ಪಕ್ಷಕ್ಕೆ ಹಿಡಿದಿದ್ದ ಗ್ರಹಣ ಬಿಟ್ಟಂತಾಗಿದೆ ಎಂದು ಕೆ.ಆರ್.ಪೇಟೆ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಆರ್.ವೆಂಕಟಸುಬ್ಬೇಗೌಡ, ಜಿ.ಪಂ. ಸದಸ್ಯ ಬಿ.ಎಲ್.ದೇವರಾಜು, ಮುಖಂಡ ಕೃಷ್ಣೇಗೌಡ ಲೇವಡಿ ಮಾಡಿದ್ದು, ನಾರಾಯಣಗೌಡರ ಆರೋಪಕ್ಕೆ ತಿರುಗೇಟು ನೀಡಿದ್ರು.

ಮಾಜಿಪ್ರಧಾನಿ ದೇವೇಗೌಡರ ಕುಟುಂಬ ವರ್ಗದವರು ಸೇರಿದಂತೆ ಅವರ ಪುತ್ರಿಯರಾದ ಡಾ.ಅನುಸೂಯಮ್ಮ, ಶೈಲಜಾ ಅವರು ಯಾವುದೇ ರಾಜಕೀಯ ಹಸ್ತಕ್ಷೇಪ ಮಾಡಿಲ್ಲ. ಗೌಡರ ಕುಟುಂಬದ ಬಗ್ಗೆ ಶಾಸಕರು ಇಲ್ಲಸಲ್ಲದ ಆರೋಪಗಳನ್ನು ಮಾಡುವುದನ್ನು ತಕ್ಷಣ ನಿಲ್ಲಿಸಿ ಪಕ್ಷ ಬಿಟ್ಟು ಗೌರವಯುತವಾಗಿ ಹೋಗಬೇಕು. ಇಲ್ಲದಿದ್ದರೆ ಶಾಸಕರ ವಿರುದ್ಧ ಜನಾಂದೋಲನ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ರು.

ವೆಂಕಟಸುಬ್ಬೇಗೌಡರು ತಾಲ್ಲೂಕಿನ ಅಭಿವೃದ್ಧಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರವು 500ಕೋಟಿ ರೂಪಾಯಿಗಳಿಗೂ ಹೆಚ್ಚಿನ ಅನುದಾನ ನೀಡಿದ್ದಾರೆ. ಬಿಜೆಪಿ ಪಕ್ಷದೊಂದಿಗೆ ಒಳ ಒಪ್ಪಂದ ಮಾಡಿಕೊಂಡು ಜೆಡಿಎಸ್ ಪಕ್ಷ ಹಾಗೂ ಹೈಕಮಾಂಡ್ ಆದೇಶವನ್ನು ಧಿಕ್ಕರಿಸಿ ಶಾಸಕರು ವಲಸೆ ಹೋಗುತ್ತಿದ್ದಾರೆ.

ಜೆಡಿಎಸ್ ಪಕ್ಷದ ಕಾರ್ಯಕರ್ತರು ಹಾಗೂ ತಾಲ್ಲೂಕಿನ ಮತದಾರರನ್ನು ಅನಾಥರನ್ನಾಗಿ ಮಾಡುತ್ತಿದ್ದಾರೆ. ಶಾಸಕ ನಾರಾಯಣಗೌಡ ದ್ವಿಮುಖ ವ್ಯಕ್ತಿತ್ವ ಹೊಂದಿರುವ ರಾಜಕಾರಣಿಯಾಗಿದ್ದು, ಅವರ ನಡೆನುಡಿ ಮಾತುಕತೆ ಒಂದಕ್ಕೊಂದು ಸಂಬಂಧವೇ ಇಲ್ಲದಂತಿದೆ ಎಂದು ಮುಖಂಡ ಬಸ್ ಕೃಷ್ಣೇಗೌಡ ಆಕ್ರೋಶ ವ್ಯಕ್ತಪಡಿಸಿದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ