ಕುಡಿದು ಮತ್ತಿನಲ್ಲಿ ರಸ್ತೆಗೆ ಬಂದು ಕೂಗಾಡುತ್ತಿದ್ದವರನ್ನು ಕಂಡು ಬುದ್ದಿವಾದ ಹೇಳಿದ್ದಕ್ಕೆ ಕೋಪಗೊಂಡು ಕೊಲೆ ಮಾಡಿದ್ದ ಅಸ್ಸೋಂ ಮೂಲದ ಆರೋಪಿಗಳನ್ನು ಕೋಣನಕುಂಟೆ ಪೊಲೀಸರು ಬಂಧಿಸಿದ್ದಾರೆ.
ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ಹನುಮಂತನಗರದಲ್ಲಿರುವ ಲೇಬರ್ ಶೆಡ್ನಲ್ಲಿ ಜ.1ರಂದು ಮುರುಗ ಎಂಬಾತನನ್ನು ಕೊಲೆ ಮಾಡಿದ ಆರೋಪದಡಿ ಆಯಂಥೋನಿ ಸಿಂಗ್, ಕಿಶನ್ ಮತ್ತು ರಂಜನ್ ಟರ್ಕಿ ಎಂಬುವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಮೂವರು ಪರಾರಿಯಾಗಿದ್ದು, ಅವರ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಕೊಲೆಯಾಗಿದ್ದ ಮುರುಗ ಸಣ್ಣದೊಂದು ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದ. ಅಲ್ಲದೇ, ಏರಿಯಾದಲ್ಲಿ ಗಾರೆ ಕೆಲಸ ಮಾಡುತಿದ್ದ. ಹೀಗಿದ್ದವನು ಇದೇ ಜನವರಿ 1ರಂದು ತಡರಾತ್ರಿ ಭೀಕರವಾಗಿ ಕೊಲೆಯಾಗಿ ಹೋಗಿದ್ದ. ಕಟ್ಟಡದ ಕೆಲಸಕ್ಕೆ ಬಂದ ಆರು ಮಂದಿಯ ಗ್ಯಾಂಗ್ ಕ್ರಿಕೆಟ್ ಬ್ಯಾಟ್ನಿಂದ ಮುರುಗನ್ ಮೇಲೆ ಹಲ್ಲೆ ಮಾಡಿ ಹತ್ಯೆಗೈದಿದ್ದಾರೆ.
ಜ.1ರಂದು ರಾತ್ರಿ ಮನೆಯಲ್ಲಿದ್ದ ಮುರುಗನನ್ನು ಪಕ್ಕದ ಮನೆಯ ಬಾಲಕನೊಬ್ಬ ಕರೆದು ಆಡೋಕೆ ಮನೆಯಲ್ಲಿರುವ ಕ್ರಿಕೆಟ್ ಬ್ಯಾಟ್ ಕೊಡಿ ಎಂದು ಕೇಳಿದ್ದ. ಬಾಲಕ ಕರೆದ ಎಂದು ಅವನ ಜೊತೆ ಬ್ಯಾಟ್ ಹಿಡಿದುಕೊಂಡು ಸಿಗರೇಟು ಸೇದುವುದಕ್ಕೆ ಮನೆಯಿಂದ ಕೂಗಳತೆ ದೂರದ ಅಂಗಡಿ ಕಡೆ ನಡೆದಿದ್ದ. ಬಿಡಾರದಲ್ಲಿದ್ದ ಅಸ್ಸೋಂ ಹುಡುಗರು ಕುಡಿದ ಮತ್ತಿನಲ್ಲಿ ಗಲಾಟೆ ಮಾಡಿಕೊಂಡು ರಸ್ತೆಗೆ ಬಂದಿರೋದನ್ನ ಗಮನಿಸಿದ್ದಾನೆ.
ಗಲಾಟೆ ಮಾಡಬೇಡಿ ಎಂದು ಗಟ್ಟಿ ಧ್ವನಿಯಲ್ಲಿ ಅಸ್ಸೋಂ ಹುಡುಗರಿಗೆ ಹೇಳಿದ್ದಾನಷ್ಟೇ.. ಅಷ್ಟಕ್ಕೆ ಅಸ್ಸೋಂ ಹುಡುಗರು ಮುರುಗನ ಕೈಯಲ್ಲಿದ್ದ ಬ್ಯಾಟ್ ಕಸಿದುಕೊಂಡು ಮುರುಗನನ್ನ ಹೊಡೆದು ಸಾಯಿಸೇ ಬಿಟ್ಟಿದ್ದರು. ನಂತರ ಫ್ಲೈಟ್ ಹತ್ತಿ ಅಸ್ಸೋಂಗೆ ತೆರಳಿದ್ರು. ಬೇಟೆಗಿಳಿದ ಪೊಲೀಸರು ಆರು ಜನರ ಪೈಕಿ ಮೂವರನ್ನು ಬಂಧಿಸಿದ್ದಾರೆ.
ಇದು ಒಂದು ಕಡೆ ಆದ್ರೆ, ಮುರುಗ ಪೋಷಕರು ಹೇಳೋದೇ ಬೇರೆ. ಅಪ್ರಾಪ್ತ ಯುವಕ ಮತ್ತು ಮುರುಗನ್ ಮಧ್ಯೆ ಕ್ರಿಸ್ಮಸ್ ಹಬ್ಬದಂದು ಕೇಕ್ ಕಟ್ ಮಾಡೋ ವಿಚಾರಕ್ಕೆ ಜಗಳ ಆಗಿದೆ. ಅದಾಗಿಯೂ ಇಬ್ಬರು ಚೆನ್ನಾಗಿಯೇ ಇದ್ದರು. ಹೀಗಿರುವಾಗ ಆತನೆ ಕರೆದುಕೊಂಡು ಹೋಗಿ ಕೊಲೆ ಮಾಡಿಸಿರಬೇಕು ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.