ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ನಗರಗಳಲ್ಲಿ ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತೇವೆ ಎಂದು ಹೆಸರು ಹೇಳಿಕೊಂಡು ಲಕ್ಷಗಟ್ಟಲೇ ಡೊನೇಷನ್ ವಸೂಲಿ ಮಾಡುವುದು, ಪೋಷಕರ ಸಂದರ್ಶನ ಮಾಡುವುದು ಮಾಡುತ್ತಿದ್ದರು. ಆದರೆ ಇನ್ನು ಮುಂದೆ ಹೀಗೆ ಮಾಡುವಂತಿಲ್ಲ. ಖಾಸಗಿ ಶಾಲೆಗಳಿಗೆ ಸರ್ಕಾರ ಕೆಲವು ಕಟ್ಟುನಿಟ್ಟಿನ ರೂಲ್ಸ್ ಮಾಡಿದೆ. ಅದರ ವಿವರ ಇಲ್ಲಿದೆ ನೋಡಿ.
ಖಾಸಗಿ ಶಾಲೆಗಳು ಮನಸೋ ಇಚ್ಛೆ ಫೀಸ್ ಏರಿಸಿರುವುದರ ಬಗ್ಗೆ ಈ ಬಾರಿ ಸಾಕಷ್ಟು ದೂರುಗಳು ಕೇಳಿಬಂದಿತ್ತು. ಇದರ ಬೆನ್ನಲ್ಲೇ ಶಿಕ್ಷಣ ಇಲಾಖೆ ಕೆಲವು ಕಡ್ಡಾಯ ನಿಯಮ ರೂಪಿಸಿದೆ. ಈ ಮೂಲಕ ಖಾಸಗಿ ಶಾಲೆಗಳ ದಬ್ಬಾಳಿಕೆಗೆ ಕಡಿವಾಣ ಹಾಕಲು ಪ್ರಯತ್ನಿಸಿದೆ.
ದಾಖಲಾತಿ ಹೆಸರಿನಲ್ಲಿ ಕೆಲವು ಶಾಲೆಗಳಲ್ಲಿ ಪೋಷಕರ ಸಂದರ್ಶನ ಮಾಡಲಾಗುತ್ತದೆ. ಇಂತಹ ಘಟನೆಗಳ ಬಗ್ಗೆ ದೂರು ಬಂದಲ್ಲಿ ಇನ್ನು ಮುಂದೆ ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ.
ನಿಯಮಗಳೇನು?
-ಶುಲ್ಕದ ಸಂಪೂರ್ಣ ಮಾಹಿತಿಯನ್ನು ಮಾಹಿತಿ ಪುಸ್ತಕ, ನೋಟಿಸ್ ಬೋರ್ಡ್ ನಲ್ಲಿ ನೀಡಬೇಕು.
-ದಾಖಲಾತಿ ಸಂದರ್ಭದಲ್ಲಿ ಮಕ್ಕಳು, ಪೋಷಕರ ಸಂದರ್ಶನ ಮಾಡುವಂತಿಲ್ಲ.
-ಶಾಲಾ ಆಡಳಿತ ಮಂಡಳಿಯು ತಾವು ಅಧಿಸೂಚಿಸಿದ ಶುಲ್ಕದ ಹೊರತಾಗಿ ಯಾವುದೇ ಶುಲ್ಕ ವಸೂಲಿ ಮಾಡುವಂತಿಲ್ಲ.
-ಖಾಸಗಿ ಶಾಲೆಗಳು ಶೇ.25 ರಷ್ಟು ಆರ್ ಟಿಇ ಸೀಟುಗಳನ್ನು ಕಡ್ಡಾಯವಾಗಿ ಮೀಸಲಿಡಬೇಕು.
-ಸಹ ಶಿಕ್ಷಣ ಹೊಂದಿರುವ ಶಾಲೆಗಳಲ್ಲಿ ಶೇ.50 ರಷ್ಟು ಹೆಣ್ಣು ಮಕ್ಕಳಿಗೆ ಮೀಸಲಿರಬೇಕು.
-ಎಸ್ ಸಿ/ಎಸ್ ಟಿ ಆಡಳಿತ ಮಂಡಳಿಯ ಶಾಲೆಗಳಲ್ಲಿ ಕಡ್ಡಾಯವಾಗಿ 50% ಎಸ್ ಸಿ/ಎಸ್ ಟಿ ಮಕ್ಕಳಿರಬೇಕು.