ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಮಳೆ ಯಥೇಚ್ಛವಾಗಿ ಆಗುತ್ತಿದ್ದು ಮುಂದಿನ ಎರಡು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆಯಿದೆ ಇದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ.
ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು ಮುಂದಿನ 72 ಗಂಟೆಗಳ ಕಾಲ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ದಕ್ಷಿಣ ಕನ್ನಡದಲ್ಲಿ ಇಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲೂ ಮೋಡ ಕವಿದ ವಾತಾವರಣವಿದೆ.
ಕರಾವಳಿ ಮತ್ತು ಮಲೆನಾಡಿನಲ್ಲಿ ಕಳೆದ ಒಂದು ವಾರದಿಮದ ನಿರಂತರ ಮಳೆಯಾಗುತ್ತಿದೆ. ಇದು ಇನ್ನೂ ಮೂರ್ನಾಲ್ಕು ದಿನ ಮುಂದುವರಿಯುವ ಸಾಧ್ಯತೆಯಿದೆ. ಈಗಾಗಲೇ ಹಲವು ಕಡೆ ಕರಾವಳಿ ಭಾಗದಲ್ಲಿ ಗುಡ್ಡ ಕುಸಿತ, ಮನೆಗಳಿಗೆ ನೀರು ನುಗಿದ್ದ ವರದಿಯಾಗಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಏರಿಳಿತ ಪರಿಣಾಮ ಕರಾವಳಿ ಭಾಗದಲ್ಲಿ ಹೆಚ್ಚಿನ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಈ ಭಾಗಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕದ ಒಳನಾಡು ಜಿಲ್ಲೆಗಳಾದ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ, ಕೊಡಗು, ಬಳ್ಳಾರಿ, ಮೈಸೂರು, ದಾವಣಗೆರೆ ಮುಂತಾದೆಡೆ ಸಾಧಾರಣ ಮಳೆಯಾಗಿದೆ.
ಉತ್ತರ ಕರ್ನಾಟಕದಲ್ಲೂ ಮಳೆಯ ವಾತಾವರಣವಿದೆ. ವಿಜಯಪುರ, ಬೆಳಗಾವಿ, ಬಾಗಲಕೋಟೆಯಲ್ಲಿ ಸಾಮಾನ್ಯ ಮಳೆಯಾಗಿದೆ. ಆದರೆ ಹಾವೇರಿ, ಗದಗ, ಕೊಪ್ಪಳ ಮುಂತಾದೆಡೆ ನಿರೀಕ್ಷಿತ ಮಳೆಯಾಗಿಲ್ಲ.