ಬೆಂಗಳೂರು: ವಿವಿಧ ರಸ್ತೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರಾಜ್ಯ ಕಾಂಗ್ರೆಸ್ ಸರ್ಕಾರ ಅಗತ್ಯ ಭೂಮಿ ನೀಡಿದರೆ ಕೇಂದ್ರದಿಂದ ಕರ್ನಾಟಕಕ್ಕೆ 2ಲಕ್ಷ ಕೋಟಿ ರೂಪಾಯಿ ನೀಡಲು ತಮ್ಮ ಸಚಿವಾಲಯ ಸಿದ್ಧವಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಹೇಳಿದರು.
ಬೆಂಗಳೂರಿನಲ್ಲಿ ಗುರುವಾರ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿ ಸಮಿತಿ ಸಭೆಯ ಸಮಾರೋಪ ಸಮಾರಂಭದಲ್ಲಿ ಗಡ್ಕರಿ ಮಾತನಾಡಿದರು.
ಈಚೆಗೆ ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದನ್ನು ಸ್ಮರಿಸಿದ ಗಡ್ಕರಿ, ರಸ್ತೆ ಕಾಮಗಾರಿಗೆ ಒಂದು ತಿಂಗಳಲ್ಲಿ ಕರ್ನಾಟಕಕ್ಕೆ 2 ಲಕ್ಷ ಕೋಟಿ ನೀಡಲು ಸಿದ್ಧ ಎಂದು ಹೇಳಿದ್ದೇನೆ. ಆದರೆ ಅವರಿಗೆ ನನ್ನ ಷರತ್ತೆಂದರೆ ಭೂಸ್ವಾಧೀನ ಮಾಡಿಕೊಳ್ಳುವುದು, ಅರಣ್ಯ ಮತ್ತಿತರ ಅನುಮತಿ ಪಡೆಯುವುದು. ಇದರಿಂದ ಕರ್ನಾಟಕದಲ್ಲಿ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆ. ನಾನು ಗಾಳಿಯಲ್ಲಿ ರಸ್ತೆಗಳನ್ನು ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಇದಲ್ಲದೆ, ರಸ್ತೆ ಯೋಜನೆಗಳ ಪ್ರಸ್ತಾಪಗಳೊಂದಿಗೆ ಕರ್ನಾಟಕದ ಅನೇಕ ಸಂಸದರು ತಮ್ಮನ್ನು ಭೇಟಿಯಾಗಲು ಬರುತ್ತಾರೆ ಎಂದು ಗಡ್ಕರಿ ಹೇಳಿದರು. ಅವರ ಬೇಡಿಕೆ ಏನೇ ಇರಲಿ, ನಾನು ಅನುಮೋದಿಸಿದ್ದೇನೆ. ಅವರಿಗಾಗಿ 3.5 ಲಕ್ಷ ಕೋಟಿ ರೂ.ಗಳ ಕಾಮಗಾರಿಯನ್ನು ಮಂಜೂರು ಮಾಡಿದ್ದೇನೆ ಎಂದರು.