ಬೆಂಗಳೂರು: ಕರ್ನಾಟಕದಲ್ಲಿ ಈಗ ತಾಪಮಾನ ವಿಪರೀತ ಎನಿಸುವಷ್ಟು ಏರಿಕೆಯಾಗಿದೆ. ಇದರ ನಡುವೆ ಅಲ್ಲಲ್ಲಿ ಮಳೆಯಾಗುತ್ತಿದ್ದು ಇಂದು ಯಾವ ಜಿಲ್ಲೆಗಳಿಗೆ ಮಳೆಯ ಸಾಧ್ಯತೆಯಿದೆ ಇಲ್ಲಿದೆ ವಿವರ.
ನಿನ್ನೆಯ ಮಟ್ಟಿಗೆ ರಾಜ್ಯದಲ್ಲಿ ಮಳೆಗೆ ಕೊಂಚ ಬ್ರೇಕ್ ಇತ್ತು. ಆದರೆ ಇಂದು ಮತ್ತೆ ಕೆಲವು ಜಿಲ್ಲೆಗಳಲ್ಲಿ ಮಳೆಯ ಸೂಚನೆಯಿದೆ. ವಿಶೇಷವಾಗಿ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳಿಗೆ ಮುಂದಿನ ಕೆಲವು ದಿನಗಳಿಗೆ ಗುಡುಗು ಸಹಿತ ಮಳೆಯ ಸೂಚನೆಯಿದೆ. ಹೀಗಾಗಿ ಕಡಲ ತೀರಗಳಿಗೆ ಸಂಜೆ ಹೊತ್ತು ಹೋಗದೇ ಇರುವುದು ಉತ್ತಮ. ಆದರೆ ಪಕ್ಕದ ಉಡುಪಿ ಜಿಲ್ಲೆಗೆ ಮಳೆಯ ಸೂಚನೆಯಿಲ್ಲ.
ಇದಲ್ಲದೆ ಶಿವಮೊಗ್ಗ, ಹಾವೇರಿ, ಗದಗ, ಕೊಪ್ಪಳ, ಧಾರವಾಡ ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆಯಿದೆ. ಉಳಿದಂತೆ ಮಂಡ್ಯ, ಮೈಸೂರು, ಕಲಬುರಗಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ವಿಪರೀತ ಸೆಖೆಯ ವಾತಾವರಣವಿದೆ. ಬೆಂಗಳೂರಿನಲ್ಲಿ ಈಗ ಗರಿಷ್ಠ ತಾಪಮಾನ 34 ಡಿಗ್ರಿಯಷ್ಟಿದೆ. ಇಂದೂ ಕೂಡಾ ಅದೇ ರೀತಿ ಸೆಖೆ, ಬಿಸಿಲಿನ ವಾತಾವರಣ ಮುಂದುವರಿಯಲಿದೆ.