ಜಮ್ಮು ಕಾಶ್ಮೀರ: ಕರ್ನಾಟಕ ಮೂಲದ ಮೂವರು ಯೋಧರು ನಿನ್ನೆ ಹುತಾತ್ಮರಾದ ದುಃಖದ ವಿಚಾರ ಬಂದೆರಗಿತ್ತು. ಈ ಮೂವರೂ ಯೋಧರ ಕುಟುಂಬದ ಹಿನ್ನಲೆ ಕೇಳಿದರೆ ನಿಜಕ್ಕೂ ಕಣ್ಣೀರು ಬರುತ್ತದೆ.
ಜಮ್ಮು ಕಾಶ್ಮೀರದಲ್ಲಿ ನಡೆದ ಅಪಘಾತದಲ್ಲಿ ರಾಜ್ಯದ ಮೂವರು ಯೋಧರು ಹುತಾತ್ಮರಾಗಿದ್ದರು. ಹುತಾತ್ಮ ಯೋಧರ ಮೃತದೇಹಗಳು ತವರಿಗೆ ಬಂದಿದೆ. ಇಂದು ಸಕಲ ಸರ್ಕಾರೀ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ.
ಕರ್ನಾಟಕದ 44 ವರ್ಷದ ಸುಬೇದಾರ್ ದಯಾನಂದ್ ತ್ರಿಕ್ಕಣ್ಣನವರ್ ಬೆಳಗಾವಿಯವರು. ಅವರೇ ತಂಡವನ್ನು ಮನ್ನಡೆಸುತ್ತಿದ್ದರು. ಕಳೆದ 25 ವರ್ಷಗಳಿಂದ ಅವರು ಸೇನೆಯಲ್ಲಿದ್ದಾರೆ. ಇನ್ನೇನು ಒಂದು ವರ್ಷದಲ್ಲಿ ನಿವೃತ್ತಿಯಾಗಿ ತಮ್ಮ ಪತ್ನಿ, ಇಬ್ಬರು ಮಕ್ಕಳೊಂದಿಗೆ ಸುಖ ಜೀವನ ಮಾಡುವ ಕನಸು ಕಂಡಿದ್ದರು. ವಿಪರ್ಯಾಸವೆಂದರೆ ಈಗಲೇ ಪ್ರಾಣ ಕಳೆದುಕೊಳ್ಳಬೇಕಾಯಿತು.
ಹುತಾತ್ಮರಾದ ಇನ್ನೊಬ್ಬ ಯೋಧನೆಂದರೆ ಬಾಗಲಕೋಟೆಯ ಮಹೇಶ್ ಮಾರಿಗೊಂಡ. ಅವರಿಗೆ ಇನ್ನೂ 25 ವರ್ಷ. ಮೂರು ವರ್ಷಗಳ ಹಿಂದಷ್ಟೇ ಮದುವೆಯಾಗಿತ್ತು. ಇನ್ನೂ ಮಕ್ಕಳಾಗಿರಲಿಲ್ಲ. ಇದೀಗ ಜೀವನದ ಸುಖ ಅನುಭವಿಸುವ ಮೊದಲೇ ಪತ್ನಿ, ಸಹೋದರ, ಸಹೋದರಿ ಹಾಗೂ ತಾಯಿಯನ್ನು ಅಗಲಿದ್ದಾರೆ.
ಹುತಾತ್ಮರಾದ ಇನ್ನೊಬ್ಬ ಯೋಧ ಕುಂದಾಪುರ ಮೂಲದ ಅನೂಪ್ ಪೂಜಾರಿ. 13 ವರ್ಷಗಳಿಂದ ಸೇನೆಯಲ್ಲಿರುವ ಅನೂಪ್ ಗೆ 33 ವರ್ಷ. ಅವರಿಗೆ ಕೇವಲ ಒಂದೂವರೆ ವರ್ಷದ ಮಗಳಿದ್ದಾಳೆ. ಇದೀಗ ಪತ್ನಿ, ಮಗಳು, ತಾಯಿ, ಇಬ್ಬರು ಅಕ್ಕಂದಿರನ್ನು ತಬ್ಬಲಿಯಾಗಿ ಮಾಡಿ ಹೋಗಿದ್ದಾರೆ. ಇದೀಗ ಮೂವರೂ ಯೋಧರೂ ದೇಶ ಸೇವೆಯ ಸಂದರ್ಭದಲ್ಲಿ ಹುತಾತ್ಮರಾಗಿದ್ದಾರೆ. ಅವರ ಕುಟುಂಬ ಕಣ್ಣೀರಿನಲ್ಲಿ ಕೈ ತೊಳೆಯುತ್ತಿದೆ.