ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಮಳೆಗಾಲದ ಆರಂಭದ ಲಕ್ಷಣಗಳಿವೆ. ಈ ಬಾರಿ ಮುಂಚಿತವಾಗಿಯೇ ಮುಂಗಾರು ಪ್ರವೇಶವಾಗಲಿದೆ ಎಂಬ ಸುದ್ದಿಯಿದೆ. ಹಾಗಿದ್ದರೆ ಕೇರಳಕ್ಕೆ ಮುಂಗಾರು ಪ್ರವೇಶ ಮಾಡುವುದು ಯಾವಾಗ ಇಲ್ಲಿದೆ ವಿವರ.
ಪ್ರತೀ ಬಾರಿಯೂ ಕೇರಳ, ಲಕ್ಷದ್ವೀಪ ದಾಟಿಕೊಂಡೇ ಮುಂಗಾರು ದಕ್ಷಿಣ ಭಾರತಕ್ಕೆ ಕಾಲಿಡುತ್ತದೆ. ಈ ಬಾರಿ ಮೇ ಕೊನೆಯ ವಾರದಲ್ಲೇ ಮುಂಗಾರು ಪ್ರವೇಶ ಮಾಡಲಿದೆ ಎಂದು ಹವಾಮಾನ ವರದಿಗಳು ಈಗಾಗಲೇ ಖಚಿತಪಡಿಸಿವೆ.
ಹವಾಮಾನ ವರದಿಗಳ ಪ್ರಕಾರ ಮೇ 27 ರಿಂದ ಜೂನ್ 1 ರೊಳಗಾಗಿ ಈ ಬಾರಿ ಮುಂಗಾರು ಕೇರಳ ಪ್ರವೇಶ ಮಾಡಲಿದೆ. ಜೂನ್ ಮೊದಲ ವಾರದಲ್ಲಿ ಕರ್ನಾಟಕದಲ್ಲೂ ಮಳೆಗಾಲ ಆರಂಭವಾಗುವ ನಿರೀಕ್ಷೆಯಿದೆ.
ಈಗಾಗಲೇ ರಾಜ್ಯದಲ್ಲಿ ಬೇಸಿಗೆಯ ಮಳೆ ಅಬ್ಬರ ಮುಂದುವರಿದಿದೆ. ರಾಜ್ಯ ರಾಜಧಾನಿ ಬೆಂಗಳೂರು, ಮೈಸೂರು, ಮಂಡ್ಯ, ದಕ್ಷಿಣ ಕನ್ನಡ, ಉಡುಪಿ, ಸೇರಿದಂತೆ ಹಲವು ಜಿಲ್ಲೆಗಳಲ್ಲಿ ನಿನ್ನೆಯೂ ಮಳೆಯಾಗಿತ್ತು. ಇಂದಿನಿಂದ ನಿರಂತರವಾಗಿ ಎಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ವರದಿಗಳು ಹೇಳುತ್ತಿವೆ.