ಬೆಂಗಳೂರು: ಕರ್ನಾಟಕದಲ್ಲಿ ಇಂದಿನಿಂದ ಹವಾಮಾನದಲ್ಲಿ ಬದಲಾವಣೆಯಾಗಲಿದೆ. ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಇಲ್ಲಿದೆ ಹವಾಮಾನ ವರದಿ.
ಕಳೆದ ಎರಡು ದಿನಗಳಿಂದ ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಬಹುತೇಕ ಕಡೆ ಮಳೆಯಾಗುತ್ತಿದೆ. ಇದರ ಜೊತೆಗೆ ಬಿಸಿಲಿನ ತಾಪಮಾನವೂ ವಿಪರೀತ ಎನಿಸುವಷ್ಟು ಏರಿಕೆಯಾಗಿದೆ. ಇಂದಿನಿಂದ ತಾಪಮಾನದಲ್ಲಿ ಮತ್ತಷ್ಟು ಬದಲಾವಣೆಯಾಗಲಿದೆ.
ಇಂದಿನಿಂದ ಸತತವಾಗಿ ನಾಲ್ಕೈದು ದಿನಗಳವರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಉತ್ತರ ಕನ್ನಡ, ಶಿವಮೊಗ್ಗ, ಮೈಸೂರು, ಮಂಡ್ಯ, ಚಾಮರಾಜನಗರ, ಚಿಕ್ಕಮಗಳೂರು, ಉಡುಪಿ, ಕೊಡಗು, ಬಾಗಲಕೋಟೆ, ವಿಜಯಪುರದಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ.
ಉಳಿದಂತೆ ಬೆಂಗಳೂರು, ತುಮಕೂರು, ಬೀದರ್, ರಾಯಚೂರು, ಹಾಸನ, ಬಳ್ಳಾರಿ, ಹಾವೇರಿಯಲ್ಲಿ ಸಾಧಾರಣ ಮಳೆಯಾಗಲಿದೆ. ಮುಂದಿನ ಒಂದು ವಾರಗಳಿಗೆ ಇದೇ ವಾತಾವರಣ ಮುಂದುವರಿಯಲಿದೆ. ಮುಂದಿನ ವಾರಂತ್ಯಕ್ಕೆ ಮುಂಗಾರು ಮಳೆ ಆಗಮನ ನಿರೀಕ್ಷೆಯಿದೆ. ಈ ಬಾರಿ ಮೇ 27 ರಿಂದ ಮುಂಗಾರು ಪ್ರವೇಶವಾಗಲಿದೆ ಎಂದು ಹವಾಮಾನ ವರದಿಗಳು ಹೇಳಿದ್ದವು.