ಹೇಳಿದ ಮಾತು ಕೇಳಿಲ್ಲ ಎಂದು ಭಾರತದ ಮೇಲೆ ಮತ್ತೆ ಸುಂಕಾಸ್ತ್ರ ಪ್ರಯೋಗಿಸಲು ಮುಂದಾದ ಡೊನಾಲ್ಡ್ ಟ್ರಂಪ್

Krishnaveni K

ಮಂಗಳವಾರ, 21 ಅಕ್ಟೋಬರ್ 2025 (12:07 IST)
ನ್ಯೂಯಾರ್ಕ್: ಭಾರತ ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ ಎಂದು ತಾನೇ ಘೋಷಿಸಿಕೊಂಡಿದ್ದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ತನ್ನ ಮಾತು ಕೇಳದೇ ಇರುವುದಕ್ಕೆ ಮತ್ತೆ ಸುಂಕಾಸ್ತ್ರಬಿಡಲು ಮುಂದಾಗಿದ್ದಾರೆ.
 

ತನ್ನ ತಾಳಕ್ಕೆ ತಕ್ಕಂತೆ ಕುಣಿಯದ ಜಗತ್ತಿನ ಎಲ್ಲಾ ರಾಷ್ಟ್ರಗಳ ಮೇಲೆ ಟ್ರಂಪ್ ಈಗ ಸುಂಕದ ಬರೆ ಹಾಕಿ ಒಂದು ರೀತಿಯಲ್ಲಿ ಬೆದರಿಕೆ ಹಾಕುತ್ತಿದ್ದಾರೆ. ಬೇರೆ ದೇಶಗಳ ಆಂತರಿಕ ವಿಚಾರಗಳು, ನಿರ್ಧಾರಗಳಲ್ಲೂ ತಮ್ಮ ಮಾತೇ ನಡೆಯಬೇಕು ಎಂಬಂತೆ ವರ್ತಿಸುತ್ತಿದ್ದಾರೆ.

ಇದೀಗ ಭಾರತ ತೈಲ ಖರೀದಿ ವಿಚಾರದಲ್ಲೂ ಅದೇ ರೀತಿ ಆಡುತ್ತಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವುದರಿಂದ ಉಕ್ರೇನ್ ವಿರುದ್ಧದ ಯುದ್ಧಕ್ಕೆ ಭಾರತ ಪರೋಕ್ಷವಾಗಿ ಹಣಕಾಸಿನ ನೆರವು ನೀಡುತ್ತಿದೆ ಎಂದು ದೊಡ್ಡ ಅಪವಾದ ಹೊರಿಸಿರುವ ಟ್ರಂಪ್ ಇದಕ್ಕಾಗಿ ಭಾರತದ ಮೇಲೆ ಭಾರೀ ಸುಂಕ ವಿಧಿಸುತ್ತಿದ್ದಾರೆ.

ಆದರೆ ಮೊನ್ನೆಯಷ್ಟೇ ಭಾರತದ ಪ್ರಧಾನಿ ಮೋದಿ, ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ತಾವೇ ಘೋಷಿಸಿಕೊಂಡಿದ್ದರು. ಆದರೆ ಇದಕ್ಕೆ ತಿರುಗೇಟು ನೀಡಿದ್ದ ಭಾರತ ತನ್ನ ಹಿತಾಸಕ್ತಿ ಕಾಪಾಡಿಕೊಳ್ಳಲಿದೆ ಎಂದಿತ್ತು.

ಇದು ಟ್ರಂಪ್ ಕೆರಳಿಸಿದೆ. ಇದೀಗ ತೈಲ ಖರೀದಿ ನಿಲ್ಲಿಸುವ ಆಶ್ವಾಸನೆ ನೀಡಿದ್ದೇ ಮೋದಿ. ಭಾರತದ ಪ್ರಧಾನಿ ಜೊತೆ ಈ ಬಗ್ಗೆ ಚರ್ಚೆ ನಡೆಸಿರುವುದೂ ನಿಜ. ರಷ್ಯಾ ತೈಲ ಖರೀದಿ ನಿಲ್ಲಿಸದೇ ಹೋದರೆ ಹೆಚ್ಚುವರಿ ಸುಂಕ ಹಾಕಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ