ಬೆಂಗಳೂರು: ಕರ್ನಾಟಕದ ಕರಾವಳಿ, ಮಲೆನಾಡಿನಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಮುಂದಿನ ಆರು ದಿನಗಳ ಕಾಲ ಕರ್ನಾಟಕದಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಈಗಲೂ ಮಳೆ ಜೋರಾಗಿಯೇ ಮುಂದುವರಿದಿದೆ. ಇಂದೂ ಕೂಡಾ ಈ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಮುಂದುವರಿಯಲಿದೆ. ನದಿಗಳು ಉಕ್ಕಿ ಹರಿಯುತ್ತಿದ್ದು, ಸಾಕಷ್ಟು ಮಳೆಯಾಗಿರುವುದರ ಸೂಚನೆಯಾಗಿದೆ.
ಆದರೆ ಬೆಂಗಳೂರಿನಲ್ಲಿ ಮಾತ್ರ ಯಾಕೋ ನಿರೀಕ್ಷಿಸಿದ ಮಳೆಯಿಲ್ಲ. ರಾಜ್ಯದಲ್ಲಿ ಮೊದಲು ಮಳೆ ಬಂದಿದ್ದೇ ಬೆಂಗಳೂರಿನಲ್ಲಿ. ಆದರೆ ಈಗ ಇಲ್ಲಿ ಸಾಕಷ್ಟು ಮಳೆಯಾಗುತ್ತಿಲ್ಲ. ಮೋಡ ಕವಿದ ವಾತಾವರಣವಿದ್ದು ಸಾಧಾರಣ ಮಳೆಯಾಗುತ್ತಿದೆ. ಇಂದಿನ ಗರಿಷ್ಠ ತಾಪಮಾನ 28 ಡಿಗ್ರಿಯಾಗಿದ್ದರೆ ಕನಿಷ್ಠ ತಾಪಮಾನ 20.5 ಡಿಗ್ರಿಯಷ್ಟಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ, ಚಿಕ್ಕಮಗಳೂರು, ಶಿವಮೊಗ್ಗದಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಹಾಸನ, ಕೊಡಗು, ಚಿತ್ರದುರ್ಗ, ಮಂಡ್ಯ, ಕೋಲಾರ, ರಾಮನಗರ, ತುಮಕೂರಿನಲ್ಲಿ ಮುಂದಿನ 6 ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ.