ಕಾವೇರಿ (ನದಿ)ಗೂ ರಮ್ಯಾಗೂ ಜಯಾಗೂ ಮುಡಿದೋದ ಮನಸು.. ..

ಸೋಮವಾರ, 12 ಸೆಪ್ಟಂಬರ್ 2016 (20:22 IST)
ಕಾವೇರಮ್ಮ ಕಾಪಾಡಮ್ಮ, ಕನ್ನಡ ನಾಡಿನ ಜೀವನದಿ ಕಾವೇರಿ...' ಮುಂತಾಗಿ ಸಿನಿಮಾಗಳಲ್ಲಿ ಹಾಡುತ್ತ, ಕನ್ನಡ ಬಾವುಟ ಹಿಡಿಯುತ್ತಿದ್ದ ಚಿತ್ರರಂಗದ ಖ್ಯಾತ ನಟಿ ರಮ್ಯ, ಮನಬಂದಂತೆ ಹೇಳಿಕೆ ನೀಡುತ್ತಾ ಸಾಗಿರುವುದು ಕಾವೇರಿ ಪುತ್ರರ ಆಕ್ರೋಶಕ್ಕೆ ಕಾರಣವಾಗಿದೆ.
ಕಾವೇರಿ ಜೀವನದಿಯ ಮಹತ್ವ ಅರಿಯದೆ, ರೈತರ ಸಂಕಷ್ಟಗಳಿಗೆ ಸ್ಪಂದಿಸದೆ. ಹೇಳಿಕೆ ನೀಡುತ್ತಿರುವುದು ಕಾವೇರಿ ಕಣಿವೆಯಲ್ಲಿನ ಜನತೆಯ ವಿರೋಧಕ್ಕೆ ತುತ್ತಾಗಿದ್ದಾರೆ.  
 
ಮಂಡ್ಯ ಜಿಲ್ಲೆಯ ಸಂಸದೆಯಾಗಿ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವ ನಿಟ್ಟಿನಲ್ಲಿ ಪ್ರಯತ್ನಿಸದೆ ಬೇಕಾಬಿಟ್ಟಿ ಹೇಳಿಕೆಗಳನ್ನು ನೀಡಿ ಕಾಣೆಯಾಗಿದ್ದಾರೆ. ಭದ್ರತೆಯ ದೃಷ್ಟಿಯಿಂದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುತ್ತಿಲ್ಲ. ಪೊಲೀಸರು ಭದ್ರತೆ ನೀಡಿದಲ್ಲಿ ಪ್ರತಿಭಟನೆಗೆ ಸಿದ್ದ ಎಂದು ಬೊಗಳೆ ಬಿಡುತ್ತಿರುವುದು ರೈತರು ಕೆಂಗೆಣ್ಣಿಗೆ ಗುರಿಯಾಗಿದೆ.
 
ನಮ್ಮ ಸರಕಾರ ರೈತರ ಪರವಾಗಿದೆ. ರೈತರಿಗೆ ನೀರು ಬಿಡಲು ಸರಕಾರ ಸಿದ್ದವಿದೆ. ಒಂದು ವೇಳೆ, ನೀರು ಹರಿಸದಿದ್ದಲ್ಲಿ ಪರಿಹಾರ ಕೊಡಲು ಸರಕಾರ ಸಿದ್ದವಿದೆ ಎಂದು ಅಜ್ಞಾನಿಯಂತೆ ಹೇಳಿಕೆ ನೀಡುವ ರಮ್ಯಗೆ ಕಾವೇರಿ ಜೀವನದಿಯಿಂದ ಎಷ್ಟು ಹೆಕ್ಟೆರ್ ಭೂಮಿಗೆ ನೀರುಣಿಸಲಾಗುತ್ತದೆ ಎನ್ನುವ ಅಲ್ಪ ತಿಳುವಳಿಕೆಯಾದರೂ ಇದೆಯೇ? 
 
ಮತ್ತೊಂದೆಡೆ ಇದು ಶಾಂತ ಸ್ವಭಾವದ ಕನ್ನಡಿಗರು ಮತ್ತು ತಮಿಳರ ನಡುವೆ ದ್ವೇಷ ಹೆಚ್ಚಿಸಿ ರಾಜಕೀಯದ ಬೆಳೆ ಬೇಯಿಸಿಕೊಳ್ಳುವುದು ತಮಿಳುನಾಡು ಮುಖ್ಯಮಂತ್ರಿ ಅಮ್ಮ ಎಂದು ಕರೆಸಿಕೊಳ್ಳುವ ಜಯಲಲಿತಾಗೆ ಗೌರವ ತರುವುದಿಲ್ಲ.
 
ಕಾವೇರಿ ವಿವಾದದಲ್ಲಿ ಕರ್ನಾಟಕ ನ್ಯಾಯಾಲಯದಲ್ಲಿ ಪದೇ ಪದೇ ಸೋಲುತ್ತಿರುವುದು ವಿಷಾದನೀಯವಾಗಿದೆ. ಎಂತಹ ವಿಚಿತ್ರವೆಂದರೆ, ಅಕ್ರಮ ಆಸ್ತಿಗಳಿಕೆಯ ವಿಚಾರದಲ್ಲಿ ಜಯಲಲಿತಾ ಪರ ವಕೀಲತ್ತು ವಹಿಸಿದ್ದ ಫಾಲಿ ನಾರಿಮನ್ ಕರ್ನಾಟಕದ ಪರ ವಕೀಲ!!. 
 
ಸುಪ್ರೀಂ ಕೋರ್ಟಿನಲ್ಲಿ ಜಯಲಲಿತಾ ಪರ ವಕೀಲನೊಬ್ಬ ಮತ್ತೊಂದು ವಿಚಾರದಲ್ಲಿ ಜಯಲಲಿತಾ ವಿರುದ್ಧ ವಾದಿಸುತ್ತಾರೆ ಎಂದರೆ ನಂಬಲು ಸಾಧ್ಯವೇ? ಕಳೆದ 32 ವರ್ಷಗಳಿಂದ ರಾಜ್ಯಕ್ಕೆ ನ್ಯಾಯಾಲಯದಲ್ಲಿ ಸೋಲಾಗುತ್ತಿದ್ದರೂ ಅವರನ್ನೇ ಮುಂದುವರಿಸುವ ರಾಜಕಾರಣಿಗಳಿಗೆ ಏನನ್ನಬೇಕು?
 
ಕಳೆದ 32 ವರ್ಷಗಳ ಅವಧಿಯಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳ ಸರಕಾರಗಳು ರಾಜ್ಯದಲ್ಲಿ ಸರಕಾರ ನಡೆಸಿವೆ. ಆದರೆ, ಮಹಾಮೇಧಾವಿಗಳು ಎನಿಸಿಕೊಂಡ ಯಾರೊಬ್ಬರು ಕಾವೇರಿ ವಿವಾದವನ್ನು ಇತ್ಯರ್ಥಗೊಳಿಸಲು ನಿಟ್ಟಿನಲ್ಲಿ ರಾಜಕೀಯ ಇಚ್ಚಾಶಕ್ತಿ ತೋರದಿರುವುದು ವಿಪರ್ಯಾಸ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ