ತಮ್ಮ ರಾಜ್ಯದ ಲಾರಿ ಡ್ರೈವರ್ ಅರ್ಜುನ್ ಗಾಗಿ ಶಿರೂರಿನಲ್ಲಿ ಬೀಡುಬಿಟ್ಟ ಕೇರಳದ ಶಾಸಕ, ಮಾಧ್ಯಮಗಳು

Krishnaveni K

ಸೋಮವಾರ, 22 ಜುಲೈ 2024 (09:30 IST)
ಶಿರೂರು: ತಮ್ಮ ರಾಜ್ಯದ ಲಾರಿ ಡ್ರೈವರ್ ಅರ್ಜುನ್ ಶಿರೂರಿನಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಸಿಲುಕಿಕೊಂಡಿದ್ದಾನೆ ಎಂಬ ಕಾರಣಕ್ಕೆ ಕೇರಳದ ಶಾಸಕ, ಮಾಧ್ಯಮಗಳು ಎರಡು ದಿನಗಳಿಂದ ಅಲ್ಲಿಯೇ ಬೀಡುಬಿಟ್ಟಿದ್ದಾರೆ.

ಅರ್ಜುನ್ ಕುಟುಂಬಸ್ಥರು ಶಿರೂರಿನಲ್ಲಿ ತಮ್ಮ ಮನೆ ಮಗನ ಹುಡುಕಾಟಕ್ಕೆ ಸೇನೆ ಕರೆಸಬೇಕು ಎಂದು ಪಟ್ಟು ಹಿಡಿದಿದ್ದರು. ಈ ಕುಟುಂಬಸ್ಥರ ಅಳಲಿಗೆ ಅಲ್ಲಿನ ರಾಜ್ಯ ಸರ್ಕಾರ ಸ್ಪಂದಿಸಿ ಕರ್ನಾಟಕ ಸರ್ಕಾರದ ಜೊತೆ ಮಾತುಕತೆ ನಡೆಸಿತ್ತು. ಅರ್ಜುನ್ ಕುಟುಂಬಸ್ಥರಂತೂ ಇಲ್ಲಿಯೇ ಬೀಡು ಬಿಟ್ಟಿದ್ದಾರೆ.

ಅವರಿಗೆ ಬೆಂಬಲವಾಗಿ ಈಗ ಕೇರಳದ ಮಂಜೇಶ್ವರ ಶಾಸಕ ಅಶ್ರಫ್, ಅಲ್ಲಿನ ಮಾಧ್ಯಮಗಳು ಗುಡ್ಡ ಕುಸಿತವಾದ ಸ್ಥಳದಲ್ಲಿಯೇ ಎರಡು ದಿನಗಳಿಂದ ಮೊಕ್ಕಾಂ ಹೂಡಿದ್ದಾರೆ. ಕೇರಳದ ಮಾಧ್ಯಮಗಳು ನಿರಂತರವಾಗಿ ಎರಡು ದಿನದಿಂದ ಶಿರೂರು ಗುಡ್ಡ ಕುಸಿತದ ಪ್ರಕರಣವನ್ನು ವರದಿ ಮಾಡುತ್ತಲೇ ಇವೆ.

ಜೊತೆಗೆ ಕೇರಳದವರೇ ಆದ ರಕ್ಷಣಾ ಕಾರ್ಯಕರ್ತರೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ತಮ್ಮ ರಾಜ್ಯದ ಒಬ್ಬ ವ್ಯಕ್ತಿ ಸಿಲುಕಿಕೊಂಡಿದ್ದಾನೆಂಬ ಕಾರಣಕ್ಕೆ ಒಗ್ಗಟ್ಟಾಗಿ ಬಂದು ಮೊಕ್ಕಾಂ ಹೂಡಿರುವುದನ್ನು ಮೆಚ್ಚಲೇಬೇಕು. ಶಿರೂರು ಗುಡ್ಡ ಕುಸಿತದಲ್ಲಿ ಇದುವರೆ 10 ಮಂದಿ ಸಿಲುಕಿಕೊಂಡಿದ್ದಾರೆನ್ನಲಾಗಿತ್ತು. ಈ ಪೈಕಿ ಅರ್ಜುನ್ ಕೂಡಾ ಒಬ್ಬರು. ಇವರಲ್ಲಿ 7 ಮಂದಿಯ ಮೃತದೇಹ ಸಿಕ್ಕಿದೆ. ಇನ್ನು ಮೂವರಿಗಾಗಿ ಹುಡುಕಾಟ ಮುಂದುವರಿದೆ. ಅರ್ಜುನ್ ಮೊಬೈಲ್ ರಿಂಗ್ ಆಗುತ್ತಿದ್ದರಿಂದ ಅವರು ಬದುಕಿರಬಹುದು ಎಂಬ ಆಶಾಭಾವನೆಯಲ್ಲಿ ಕುಟುಂಬಸ್ಥರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ