ನ್ಯಾಯಾಲಯಕ್ಕೇ ಮೋಸ ಮಾಡ್ತಿದ್ದ ಖದೀಮರು..! ?

ಭಾನುವಾರ, 24 ಏಪ್ರಿಲ್ 2022 (09:34 IST)
ಬೆಂಗಳೂರು :  ಹಣದಾಸೆಗೆ ಜೈಲಿನಲ್ಲಿರುವ ಆರೋಪಿಗಳಿಗೆ ಜಾಮೀನಿಗೆ ಕೊಡಿಸಲು ನ್ಯಾಯಾಲಯಕ್ಕೆ ನಕಲಿ ದಾಖಲೆ ಸಲ್ಲಿಸಿ ಶ್ಯೂರಿಟಿ ನೀಡುತ್ತಿದ್ದ 9 ಜನರ ತಂಡವನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
 
ಸಂಜೀವಿನಿ ನಗರದ ಪುಟ್ಟಸ್ವಾಮಿ, ಮಧುಗಿರಿಯ ನಸ್ರೀನ್, ನಗರದ ಜಗದೀಶ್ ಅಲಿಯಾಸ್ ಬಾಂಬೆ, ಚಂದ್ರೇಗೌಡ, ಸೊನ್ನೇಗೌಡ, ವೆಂಕಟೇಶ್, ಶಿಕ್ಷಣ ಇಲಾಖೆಯ ‘ಡಿ’ ಗ್ರೂಪ್ ನೌಕರ ಅಂಜಿನಪ್ಪ, ಮಂಜುನಾಥ, ರಾಜಣ್ಣ ಬಂಧಿತರು.

ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ನಕಲಿ ಸೀಲುಗಳು, ನಕಲಿ ಪಹಣಿಗಳು, ಕಂಪ್ಯೂಟರ್, ಪ್ರಿಂಟರ್, ಸ್ಕಾ್ಯನರ್, ಲ್ಯಾಮಿನೇಷನ್ ಮಿಷನ್, ಆಟೋ ರಿಕ್ಷಾ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಪುಟ್ಟಸ್ವಾಮಿ ಜೈಲಿನಲ್ಲಿರುವ ಆರೋಪಿಗಳನ್ನು ಸಂಪರ್ಕಿಸಿ ಜಾಮೀನಿಗೆ ಶ್ಯೂರಿಟಿ ಕೊಡಿಸುವುದಾಗಿ ವ್ಯವಹಾರ ಕುದುರಿಸುತ್ತಿದ್ದ. ಬಳಿಕ ತನ್ನ ಸಹಚರರ ಜತೆ ತಾಲೂಕು ಕಚೇರಿಗಳಿಗೆ ತೆರಳಿ ರೈತರು ಎಂದು ಹೇಳಿಕೊಂಡು ರೈತರ ಪಹಣಿ ಮತ್ತು ಮ್ಯೂಟೇಷನ್ಗಳನ್ನು ಪಡೆಯುತ್ತಿದ್ದರು.

ಬಳಿಕ ಆರೋಪಿ ಮಂಜುನಾಥ್ ಹಾಗೂ ನಸ್ರೀನ್ ಮೂಲಕ ಪಹಣಿಯಲ್ಲಿರುವ ವ್ಯಕ್ತಿಯ ಹೆಸರಿನಲ್ಲಿ ನಕಲಿ ಆಧಾರ್ ಕಾರ್ಡ್ ತಯಾರಿಸುತ್ತಿದ್ದರು. ಬಳಿಕ ಶಿಕ್ಷಣ ಇಲಾಖೆಯ ಡಿ ಗ್ರೂಪ್ ನೌಕರ ಅಂಜಿನಪ್ಪನ ನೆರವಿನಿಂದ ನಕಲಿ ಸೀಲು ಬಳಸಿಕೊಂಡು ಶ್ಯೂರಿಟಿ ಬಾಂಡ್ ದೃಢಿಕರಿಸಿ ದಾಖಲೆ ಸಿದ್ಧಪಡಿಸಿ ವಕೀಲರ ಮೂಲಕ ನಕಲಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಿದ್ದರು. ಆರೋಪಿಗಳ ಜಾಮೀನಿಗೆ ಶ್ಯೂರಿಟಿ ನೀಡುತ್ತಿದ್ದರು ಎಂಬುದು ವಿಚಾರಣೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ