3 ತಾಸಿನಲ್ಲಿ ಅಪಹರಣ ಪ್ರಕರಣ ಅಂತ್ಯ

ಗುರುವಾರ, 3 ಫೆಬ್ರವರಿ 2022 (20:01 IST)
ಕಟ್ಟಡ ಗುತ್ತಿಗೆದಾರನಾಗಿದ್ದ ಇಂಜಿನಿಯರ್‌ ನನ್ನು ಅಪಹರಿಸಿ 30 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಅಪಹರಣಕಾರರನ್ನು ಯಲಹಂಕ ಪೊಲೀಸರು ಕೇವಲ ಮೂರು ತಾಸಿನಲ್ಲಿ ಆರೋಪಿಗಳ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಯಲಹಂಕ ಇನ್‌ಸ್ಪೆಕ್ಟರ್ ಸತ್ಯನಾರಾಯಣ ಮತ್ತು ತಂಡ ಅಪಹರಣಕಾರರ ಗ್ಯಾಂಗ್‌ನ್ನು ಕೋಲಾರ ಸಮೀಪ ಬಂಧಿಸಿ ಅಪಹರಣವಾಗಿದ್ದ ಇಂಜಿನಿಯರ್‌ನನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.
ಬುಧವಾರ ಮಧ್ಯಾಹ್ನ ಯಲಹಂಕ ರೈತ ಸಂತೆ ಬಳಿ ಕಟ್ಟಡ ಗುತ್ತಿಗೆದಾರನಾಗಿರುವ ಇಂಜಿನಿಯರ್ ಮಾನಸ್ ತನ್ನ ಆಪ್ತರ ಜತೆ ನಿಂತಿದ್ದರು. ಸ್ಕಾರ್ಫಿಯೋ ಕಾರಿನಲ್ಲಿ ಬಂದಿದ್ದ ಐವರು ಆಘಂತುಕರು ಇಂಜಿನಿಯರ್ ಮಾನಸ್ ನನ್ನು ಅಹಪರಿಸಿ ಕಾರಿನಲ್ಲಿ ಕೂರಿಸಿಕೊಂಡು ತೆರಳಿದ್ದರು. ಬುಧವಾರ ಬೆಳಗ್ಗೆ 9. 40 ಸುಮಾರಿನಲ್ಲಿ ಈ ಘಟನೆ ನಡೆದಿತ್ತು. ಮಾನಸ್ ಜತೆಗಿದ್ದ ಯುವತಿಯೊಬ್ಬರು ಪೊಲೀಸರಿಗೆ ಕರೆ ಮಾಡಿ ಅಪಹರಣ ಮಾಡಿದ ವಿಚಾರವನ್ನು ತಿಳಿಸಿದ್ದರು.
 
ಯಲಹಂಕ ಪೊಲೀಸ್ ಇನ್‌ಸ್ಪೆಕ್ಟರ್ ಸತ್ಯನಾರಾಯಣ ಮತ್ತು ತಂಡ ಆರೋಪಿಗಳ ಎಡೆಮುರಿ ಕಟ್ಟಲು ಆಗಲೇ ವಿಶೇಷ ತಂಡವನ್ನು ರಚಿಸಿತ್ತು. ಪಿಎಸ್‌ಐ ಶೈಲಜಾ ನೇತೃತ್ವದಲ್ಲಿ ತಂಡ ರಚಿಸಿ ಆರೋಪಿಗಳ ಚಲನವಲನದ ಮೇಲೆ ನಿಗಾ ಇಡಲಾಗಿತ್ತು. ಮತ್ತೊಂದು ತಂಡ ಆರೋಪಿಗಳ ಭೇಟೆಗೆ ಇಳಿದಿತ್ತು. ಅಪಹರಣಕಾರರ ಮೊಬೈಲ್ ಟವರ್ ಮಾಹಿತಿ ಆಧರಿಸಿ ಕೋಲಾರ ಕಡೆ ಚಲಿಸುತ್ತಿರುವುದು ಗೊತ್ತಾಗಿತ್ತು.
 
ಕೂಡಲೇ ಕಾರ್ಯಪ್ರವೃತ್ತರಾದ ಯಲಹಂಕ ಇನ್‌ಸ್ಪೆಕ್ಟರ್ ಸತ್ಯನಾರಾಯಣ ಮತ್ತು ತಂಡ, ಕೋಲಾರ ಬಳಿ ಐವರು ಅಪಹರಣಕಾರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಅವರ ಜತೆಗಿದ್ದ ಇಂಜಿನಿಯರ್ ಮಾನಸ್ ಅವರನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳು ಇಂಜಿನಿಯರ್ ಮಾನಸ್ ಬಳಿ 30 ಲಕ್ಷ ರೂ.ಗಾಗಿ ಬೇಡಿಕೆ ಇಟ್ಟಿದ್ದರು ಎಂಬುದು ಪ್ರಾಥಮಿಕ ವಿಚಾರಣೆ ವೇಳೆ ತಿಳಿದು ಬಂದಿದೆ.
 
ವಿಚಾರಣೆ ವೇಳೆ ನಂದ ಮತ್ತು ಮಾನಸ್ ಇಬ್ಬರು ಕಟ್ಟಡ ನಿರ್ಮಾಣದ ಪಾರ್ಟನರ್ ಆಗಿದ್ದರು. ನಂದ ಬಳಿ ಮಾನಸ್ ಹಿಟಾಚಿ ಮತ್ತು ಜೆಸಿಬಿಗಳನ್ನು ಬಾಡಿಗೆಗೆ ಪಡೆದಿದ್ದ. ಅದರ ವೆಚ್ಚ 30 ಲಕ್ಷ ರೂ. ತಗುಲಿದ್ದು, ಅದನ್ನು ನೀಡುವಂತೆ ಕೇಳಿದ್ದ. ಕೆಲಸ ಸರಿಯಾಗಿ ಮಾಡಿಲ್ಲ. ಬೇರೆಯವರಿಂದ ಕೆಲಸ ಮಾಡಿದ್ದೇನೆ ಎಂದು ಹೇಳಿ ಮಾನಸ್ ಹಣ ನೀಡಲು ನಿರಾಕರಿಸಿದ್ದ. ಇದರಿಂದ ಬೇಸತ್ತ ನಂದ ಮತ್ತು ಆಪ್ತರು ಮಾನಸ್ ನನ್ನು ಅಪಹರಿಸಿ ಹಣ ವಸೂಲಿ ಮಾಡುವ ಪ್ಲಾನ್ ರೂಪಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ