ಅಸಲಿ ಚಿನ್ನವನ್ನ ಗಿರವಿ ಇಟ್ಟುಕೊಂಡ ಖಾಸಗಿ ಫೈನಾನ್ಸ್ ಕಂಪನಿಯೊಂದು ತನ್ನ ಗ್ರಾಹಕನಿಗೆ ನಕಲಿ ಚಿನ್ನ ನೀಡಿ ವಂಚಿಸಿದ ಪ್ರಕರಣವೊಂದು ನಂಜನಗೂಡು ತಾಲೂಕಿನ ಹುಲ್ಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕೋಶಮಟ್ಟಂ ಫೈನಾನ್ಸ್ ಕಂಪನಿ ಗ್ರಾಹಕನಿಗೆ ಪಂಗನಾಮ ಹಾಕಿದೆ.ಮಾದಾಪುರ ಗ್ರಾಮದ ಮಹೇಶ್ ಎಂಬುವರು ಫೈನಾನ್ಸ್ ನಿಂದ ವಂಚನೆಗೆ ಒಳಗಾಗಿದ್ದಾರೆ.2021 ಆಗಸ್ಟ್ ನಲ್ಲಿ ಮಹೇಶ್ ರವರು ಹುಲ್ಲಹಳ್ಳಿಯಲ್ಲಿರುವ ಕೋಶಮಟ್ಟಂ ಫೈನಾನ್ಸ್ ನಲ್ಲಿ ಚಿನ್ನದ ಸರವನ್ನು 42 ಸಾವಿರ ರೂಗಳಿಗೆ ಗಿರವಿ ಇಟ್ಟಿದ್ದಾರೆ.
ಸಾಲದ ಹಣ ಹಿಂದಿರುಗಿಸಿ ಚಿನ್ನ ಪಡೆದಾಗ ನಕಲಿ ಕೊಟ್ಟಿದ್ದಾರೆ.ಈ ಬಗ್ಗೆ ಪ್ರಶ್ನಿಸಿದಾಗ ಅಲ್ಲಿನ ಸಿಬ್ಬಂದಿಗಳು ಸಮರ್ಪಕ ಉತ್ತರ ನೀಡದೆ ಉಡಾಫೆಯಿಂದ ವರ್ತಿಸಿದ್ದಾರೆ. ನಕಲಿ ಚಿನ್ನ ಪಡೆದು ಮೋಸ ಹೋದ ಮಹೇಶ್ ರವರು ನ್ಯಾಯಕ್ಕಾಗಿ ಹುಲ್ಲಹಳ್ಳಿ ಪೊಲೀಸರ ಮೊರೆ ಹೋಗಿದ್ದಾರೆ.
ಕಂಪ್ಲೇಂಟ್ ಕೊಡ್ತೀನಿ ಅಂದ್ರೂ ಲೆಕ್ಕಿಸದ ಸಿಬ್ಬಂದಿ ಬೇಜವಾಬ್ದಾರಿಯಾಗಿ ವರ್ತಿಸಿದ್ದಾರೆ.ಕೋಶಮಟ್ಟಂ ಫೈನಾನ್ಸ್ ವಿರುದ್ದ ವಂಚನೆಗೆ ಒಳಗಾದ ಮಹೇಶ್ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವುದಾಗಿ ತಿಳಿಸಿದ್ದಾರೆ.