ಫೆಬ್ರವರಿಯಲ್ಲಿ ಕೋವಿಡ್‌ ಹೆಚ್ಚಳ: ಲಾಕ್‌ ಡೌನ್‌ ಬಗ್ಗೆ ಸಚಿವ ಸುಧಾಕರ್‌ ಹೇಳಿದ್ದೇನು..?

ಶುಕ್ರವಾರ, 14 ಜನವರಿ 2022 (17:50 IST)
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಉತ್ತುಂಗಕ್ಕೇರಿಲ್ಲ. ಫೆಬ್ರವರಿಯಲ್ಲಿ ಸೋಂಕು ಹೆಚ್ಚಾಗಿ 3-4ನೇ ವಾರದಲ್ಲಿ ಕಡಿಮೆಯಾಗಬಹುದು ಎಂದು ಆರೋಗ್ಯ ಸಚಿವ ಡಾ. ಕೆ. ಸೂಧಾಕರ್‌ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೋನಾ ಮೂರನೇ ಅಲೆ ಹಾಗೂ ಒಮಿಕ್ರನ್‌ ಕುರಿತು ನಿರ್ಲಕ್ಷ್ಯ ಬೇಡ. ಬದಲಿಗೆ ಎಲ್ಲರೂ ಮಾಸ್ಕ್‌ ಧರಿಸಿ, ಸ್ಯಾನಿಟೈಸ್‌ ಮಾಡಿಕೊಳ್ಳಿ ಎಂದು ತಿಳಿಸಿದ್ದಾರೆ.
ಈಗಾಗಲೇ ಎರಡು ವರ್ಷಗಳಿಂದ ಕೊರೋನಾ ವಿರುದ್ಧ ಹೋರಾಟ ಮಾಡಿದ್ದು, ಸೋಂಕು ನಿಯಂತ್ರಿಸಲು ಏನು ಮಾಡಬೇಕು ಎನ್ನುವ ಬಗ್ಗೆ ಪಾಠ ಕಲಿತಿದ್ದೇವೆ ಎಲ್ಲರೂ ಲಸಿಕೆ ಪಡೆದು ಸ್ವಯಂ ಪ್ರೇರಿತ ಕೋವಿಡ್‌ ನಿಯಮ ಪಾಲಿಸಿ ಎಂದರು.
ಈಗಾಗಲೇ ಲಾಕ್‌ ಡೌನ್‌ ಬಳಿಕ ಜನರ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ಅರಿವಾಗಿದೆ. ಇನ್ನು ಒಂದೂವರೆ ತಿಂಗಳು ಜನರು ಸಹಕರಿಸಿದರೆ ಕೊರೋನಾ ನಿಯಂತ್ರಣಕ್ಕೆ ಬರಲಿದೆ.
ಪ್ರಧಾನಿ ಮೋದಿ ಜತೆ ನಡೆದ ಮುಖ್ಯ ಮಂತ್ರಿಗಳ ಸಭೆಯಲ್ಲಿ ಕೂಡ ಜನರಿಗೆ ಈ ಬಗ್ಗೆ ಜಾಗೃತಿ ಮೂಡಿಸುವಂತೆ ಸೂಚಿಸಿದ್ದಾರೆ. ಜನರಿಗೆ ಆರ್ಥಿಕ ನಷ್ಟವಾಗದಂತೆ ಕ್ರಮ ಕೈಗೊಳ್ಳಿ ಎಂದಿದ್ದಾರೆ. ಲಾಕ್‌ ಡೌನ್‌ ನಿಂದ ಸೋಂಕು ನಿಯಂತ್ರಣವಾಗುವುದಿಲ್ಲ. ಎರಡು ಬಾರಿಯ ಲಾಕ್‌ ಡೌನ್‌ ಈಗಾಗಲೇ ಜನರಿಗೆ ಸಮಸ್ಯೆ ಆಗಿದೆ. ಹಾಗಾಗಿ ಲಾಕ್‌ ಡೌನ್‌ ಇಲ್ಲದೆ ಇತರ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬೆಂಗಳೂರಿನಲ್ಲಿ ಕೊರೋನಾ ಹೆಚ್ಚಾಗುತ್ತಿದೆ. ಆದರೆ ಶೇ.5-6 ಮಂದಿ ಮಾತ್ರ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ವೀಕೆಂಡ್‌ ಕರ್ಫ್ಯೂ ಜಾರಿಯಾಗಿ ಎರಡು ವಾರ ಮಾತ್ರವಾಗಿದ್ದು, ಕೊರೋನಾ ನಿಯಂತ್ರಿಸಲು ಕನಿಷ್ಠ 15 ದಿನ ಬೇಕು ಎಂದಿದ್ದಾರೆ.
ಇನ್ನು ಫೆಬ್ರವರಿ ಮೊದಲ ವಾರದಲ್ಲಿ ಕೊರೋನಾ ಗರಿಷ್ಠ ಮಟ್ಟ ತಲುಪಲಿದ್ದು, ಮೂರು ಮತ್ತು ನಾಲ್ಕನೇ ವಾರದಲ್ಲಿ ಮತ್ತೆ ಸುಧಾರಿಸಿಕೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ