ಮಂಡ್ಯ : ದಕ್ಷಿಣ ಒಳನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದರೆ ಇತ್ತ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಸುರಿಯದೇ ಇರುವುದು ಈಗ ಆತಂಕಕ್ಕೆ ಕಾರಣವಾಗಿದೆ.
ಮಳೆ ಕಡಿಮೆಯಾದ ಪರಿಣಾಮ ಕಳೆದ ಐದು ವರ್ಷದಲ್ಲಿ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ಕುಸಿದಿದೆ. ಸದ್ಯ ಕೆಆರ್ಎಸ್ ಡ್ಯಾಂನಲ್ಲಿ 82 ಅಡಿ ನೀರು ಸಂಗ್ರಹವಾಗಿದೆ.
ಸರಿಯಾದ ಪ್ರಮಾಣದಲ್ಲಿ ಮುಂಗಾರು ಬೀಳದೇ ಇದ್ದರೆ ಕೆಆರ್ಎಸ್ ಡ್ಯಾಂ ಬರಿದಾಗುವ ಸಾಧ್ಯತೆ ಇದೆ. ಇದರಿಂದಾಗಿ ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆಯಾಗಬಹುದು. ಕಡಿಮೆ ಪ್ರಮಾಣದ ನೀರು ಸಂಗ್ರಹಗೊಂಡಿರುವುದರಿಂದ ಡ್ಯಾಂ ಅಚ್ಚುಕಟ್ಟು ಪ್ರದೇಶದ ರೈತರಿಗೆ ಆತಂಕ ಶುರುವಾಗಿದೆ. ಜಲಾಶಯ 49.452 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು ಸದ್ಯ 11.990 ಟಿಎಂಸಿಯಷ್ಟು ನೀರು ಸಂಗ್ರಹವಿದೆ.