ಊರಿಗೆ ಹೋಗ್ಲಿಕುಂಟಾ... ಹೋಗ್ಲಿಕೆ ಮನಸ್ಸುಂಟು ಆದ್ರೆ ಬಸ್ ರೇಟು ಕಡಿಮೆಯಾಗಬೇಕಷ್ಟೇ

Krishnaveni K

ಮಂಗಳವಾರ, 14 ಅಕ್ಟೋಬರ್ 2025 (09:04 IST)
ಬೆಂಗಳೂರು: ಸು ಫ್ರಮ್ ಸೋ ಸಿನಿಮಾ ನೋಡಿದವರಿಗೆ ಹೋಗ್ಲಿಕೆ ಮನಸ್ಸುಂಟು ಎನ್ನುವ ರಾಜ್ ಬಿ ಶೆಟ್ಟಿಯವರ ಡೈಲಾಗ್ ಗೊತ್ತಿರುತ್ತದೆ. ಇದೀಗ ದೀಪಾವಳಿಗೆ ಊರಿಗೆ ಹೊರಡಬೇಕು ಎಂದು ಮನಸ್ಸು ಮಾಡಿದವರ ಕತೆಯೂ ಅದೇ ಆಗಿದೆ.

ಭಾನುವಾರದಿಂದ ಬುಧವಾರದವರೆಗೆ ದೀಪಾವಳಿ ಹಬ್ಬವಿದೆ. ಹಬ್ಬದ ನಿಮಿತ್ತ ಕಚೇರಿಗೆ ಸಾಲು ಸಾಲು ರಜೆಯಿದೆ. ಬೆಂಗಳೂರಿನಲ್ಲಿ ಕೆಲಸ ಮಾಡುವವರು ತಮ್ಮ ತಮ್ಮ ಊರುಗಳಿಗೆ ಕುಟುಂಬ ಸಮೇತ ಹೋಗಿ ಹಬ್ಬ ಆಚರಿಸಬೇಕೆಂದು ಕನಸು ಕಾಣುತ್ತಿದ್ದಾರೆ.

ಆದರೆ ಅವರ ಕತೆ ಈಗ ಸು ಫ್ರಮ್ ಸೋ ಸಿನಿಮಾ ಡೈಲಾಗ್ ನಂತೇ ಆಗಿದೆ. ಹೋಗ್ಲಿಕೆ ಮನಸ್ಸುಂಟು ಆದ್ರೆ ಬಸ್ಸಿನ ರೇಟು ಮಾತ್ರ ಭಯಂಕರ ಎನ್ನುವಂತಾಗಿದೆ. ಬೆಂಗಳೂರಿನಿಂದ ಮಂಗಳೂರಿಗೆ ತೆರಳುವವರಿಗೆ ಸಾಮಾನ್ಯವಾಗಿ ಇರುವ ಬಸ್ಸುಗಳಲ್ಲದೆ ಸ್ಪೆಷಲ್ ಬಸ್ ಕೂಡಾ ಹಾಕಲಾಗಿದೆ. ಸಾಮಾನ್ಯ ಎಸಿ ರಹಿತ ಬಸ್ ಗೆ 1200 ರೂ.ಗಳಾದರೆ ಸ್ಪೆಷಲ್ ಬಸ್ ಗಳಿಗೆ 1600 ರೂ.ಗೂ ಅಧಿಕ ಟಿಕೆಟ್ ದರವಿದೆ. ರಾಜಹಂಸ ಬಸ್ ಬೆಲೆಯೇ 800 ರೂ. ಇದ್ದಲ್ಲಿ ಈಗ 1200 ರೂ.ವರೆಗೆ ತಲುಪಿದೆ.

ಇದೇ ರೀತಿ ಬೆಂಗಳೂರಿನಿಂದ ಬೇರೆ ಬೇರೆ ನಗರಗಳಿಗೆ ಸಾಗುವ ಕೆಎಸ್ ಆರ್ ಟಿಸಿ ಬಸ್ ಗಳ ದರ. ದರ ಎಷ್ಟಾದರೂ ಕೊಟ್ಟು ಹೋಗುತ್ತೇನೆಂದರೆ ಬಹುತೇಕ ಬಸ್ ಗಳ ಟಿಕೆಟ್ ಸೋಲ್ಡ್ ಔಟ್.

ಇನ್ನು ಸರ್ಕಾರಿ ಬಸ್ ನದ್ದು ಈ ಕತೆಯಾದರೆ ಖಾಸಗಿ ಬಸ್ ಗಳು ಅಕ್ಷರಶಃ ಸುಲಿಗೆಗೇ ಇಳಿದಿವೆ. ಉದಾಹರಣೆಗೆ 1,000 ರೂ. ಇರುವ ಟಿಕೆಟ್ ದರ 2,500 ರೂ. ರಿಂದ 3,000 ರೂ.ವರೆಗೂ ತಲುಪಿದೆ. ಈ ದರ ದರೋಡೆಗೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತೀ ಬಾರಿಯೂ ಹಬ್ಬಗಳು ಬಂದಾಗ ಇದೇ ಕತೆ. ಇತ್ತೀಚೆಗೆ ದಸರಾ ಸಂದರ್ಭದಲ್ಲಿಯೂ ಇದೇ ಕತೆ ಆಗಿತ್ತು.

ಕೇವಲ ಊರುಗಳು ಮಾತ್ರವಲ್ಲ, ಪ್ರವಾಸೀ ತಾಣಗಳು, ಪ್ರಸಿದ್ಧ ದೇವಾಲಯಗಳಿಗೆ ತೆರಳುವ ಟಿಕೆಟ್ ಗಳೂ ಸೋಲ್ಡ್ ಔಟ್ ಆಗಿವೆ. ಬೆಂಗಳೂರಿನಿಂದ ಮಂತ್ರಾಲಯಕ್ಕೆ ಕೆಎಸ್ ಆರ್ ಟಿಸಿ ಬಹುತೇಕ ಬಸ್ ಗಳ ಟಿಕೆಟ್ ಗಳು ಸೋಲ್ಡ್ ಔಟ್ ಆಗಿವೆ. ಹೀಗಾಗಿ ಸದ್ಯಕ್ಕಂತೂ ಊರಿಗೆ ಹೋಗ್ಲಿಕೆ ಮನಸ್ಸುಂಟು ಆದರೆ ದಾರಿ ಗೊತ್ತಾಗ್ತಿಲ್ಲ ಎಂಬ ಸ್ಥಿತಿ ಸಾರ್ವಜನಿಕರದ್ದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ