ಬೆಂಗಳೂರು: ರಾಜ್ಯ ಸರ್ಕಾರ ನಿನ್ನೆ ರಾತ್ರೋ ರಾತ್ರಿ ಕೆಎಸ್ಆರ್ ಟಿಸಿ, ಬಿಎಂಟಿಸಿ ಬಸ್ ಪ್ರಯಾಣ ದರ ಹೆಚ್ಚಳ ಮಾಡಿದ್ದು ಎಲ್ಲಿಂದ ಎಲ್ಲಿಗೆ ಪ್ರಯಾಣ ಮಾಡಲು ಇನ್ನು ಎಷ್ಟು ದರವಾಗುತ್ತದೆ ಎಂಬ ವಿವರ ಇಲ್ಲಿದೆ.
ರಾಜ್ಯ ಸರ್ಕಾರ ಕೆಎಸ್ಆರ್ ಟಿಸಿ ಸೇರಿದಂತೆ ಎಲ್ಲಾ ಸಾರಿಗೆ ನಿಗಮಗಳ ಬಸ್ ಗಳ ಟಿಕೆಟ್ ದರವನ್ನು ಶೇ.15 ಕ್ಕೆ ಏರಿಕೆ ಮಾಡಿತ್ತು. ಈ ಆದೇಶ ಜನವರಿ 5 ರಿಂದ ಜಾರಿಗೆ ಬರಲಿದೆ. ಅಂದರೆ ಭಾನುವಾರದಿಂದ ಬಸ್ ಟಿಕೆಟ್ ದರ ಹೆಚ್ಚಳವಾಗಲಿದೆ.
ಇದುವರೆಗೆ ಬೆಂಗಳೂರಿನಿಂದ ಮಡಿಕೇರಿಗೆ ಕರ್ನಾಟಕ ಸಾರಿಗೆ ಸಾಮಾನ್ಯ ಬಸ್ ನಲ್ಲಿ ಸಂಚರಿಸಲು 358 ರೂ.ಗಳಾಗುತ್ತಿತ್ತು. ಇನ್ನೀಗ 411 ರೂ.ಗಳಾಗಲಿವೆ. ಬೆಂಗಳೂರಿನಿಂದ ಮೈಸೂರಿಗೆ ಈಗ 185 ರೂ.ಗಳಿದ್ದು ಇನ್ನು 213 ರೂ.ಗಳಾಗಲಿದೆ. ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಈ ಮೊದಲು 285 ರೂ. ಗಳಿತ್ತು. ಪರಿಷ್ಕೃತಗೊಂಡ ದರ 328 ರೂ.ಗೆ ಏರಿಕೆಯಾಗಿದೆ. ಬೆಂಗಳೂರಿನಿಂದ ಹಾಸನಕ್ಕೆ ಈ ಮೊದಲು 246 ರೂ. ಇನ್ನೀಗ 282 ರೂ. ಆಗಲಿದೆ. ಬೆಂಗಳೂರಿನಿಂದ ಮಂಗಳೂರಿಗೆ ಈ ಮೊದಲು 424 ರೂ. ದರವಿತ್ತು ಇನ್ನೀಗ 477 ರೂ.ಗೆ ಏರಿಕೆಯಾಗಲಿದೆ. ಬೆಂಗಳೂರಿನಿಂದ ರಾಯಚೂರಿಗೆ ಈ ಮೊದಲು 556 ರೂ.ಗಳಷ್ಟಿತ್ತು. ಇನ್ನು 639 ರೂ.ಗೆ ಏರಿಕೆಯಾಗಲಿದೆ. ಇನ್ನು ಬೆಂಗಳೂರಿನಿಂದ ಬಳ್ಳಾರಿಗೆ ಈ ಮೊದಲು 376 ರೂ.ಗಳಿದ್ದರೆ ಇನ್ನು 432 ರೂ.ಗಳಾಗಲಿದೆ.
ಕೇವಲ ಕೆಎಸ್ ಆರ್ ಟಿಸಿ ಮಾತ್ರವಲ್ಲ, ಬಿಎಂಟಿಸಿ ಬಸ್ ದರವೂ ಏರಿಕೆಯಾಗಿದೆ. ಇದುವರೆಗೆ ಮೆಜೆಸ್ಟಿಕ್ ನಿಂದ ಜಯನಗರಕ್ಕೆ 20 ರೂ.ಗಳಷ್ಟು ಟಿಕೆಟ್ ದರವಿತ್ತು. ಇನ್ನು 23 ರೂ.ಗಳಾಗಲಿವೆ. ಅದೇ ರೀತಿ ಸರ್ಜಾಪುರಕ್ಕೆ 25 ರೂ.ಗಳಷ್ಟು ಇದ್ದಿದ್ದು ಇನ್ನು 28 ರೂ.ಗಳಾಗಲಿದೆ. ಇದೇ ರೀತಿ ವಿವಿಧ ಭಾಗಗಳಲ್ಲಿ ಈಗ ಇರುವ ಬೆಲೆಗಿಂತ ಸುಮಾರು 3 ರೂ.ಗಳಷ್ಟು ಏರಿಕೆಯಾಗಲಿದೆ.