ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯ ಶಾಸಕರಲ್ಲಿ ಸಚಿವ ಸ್ಥಾನಕ್ಕೆ ಲಾಬಿ ಶುರುವಾಗಿದೆ. ಬೆಳಗಾವಿಯಲ್ಲಿ 11 ಕಾಂಗ್ರೆಸ್ ಶಾಸಕರು ಆಯ್ಕೆಯಾಗಿದ್ದು, ಸರ್ಕಾರ ರಚನೆಯಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ 11ರ ಪೈಕಿ 5 ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ. ಶಾಸಕರಾದ ಗಣೇಶ ಹುಕ್ಕೇರಿ, ಲಕ್ಷ್ಮಣ ಸವದಿ, ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳ್ಕರ್, ಮಹಾಂತೇಶ ಕೌಜಲಗಿ ನಡುವೆ ಮಂತ್ರಿಗಿರಿಗಾಗಿ ಲಾಬಿ ಶುರುವಾಗಿದೆ. ಹ್ಯಾಟ್ರಿಕ್ ಗೆಲುವು ಪಡೆದ ಪುತ್ರ ಗಣೇಶ ಹುಕ್ಕೇರಿಗೆ ಸಚಿವ ಸ್ಥಾನ ನೀಡಬೇಕೆಂದು ಪ್ರಕಾಶ್ ಹುಕ್ಕೇರಿ
ಬೇಡಿಕೆ ಇಟ್ಟಿದ್ದಾರಂತೆ. ಬಿಜೆಪಿ ತೊರೆದು ಬಂದ ಲಕ್ಷ್ಮಣ ಸವದಿ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.. ಮಹಿಳಾ ಕೋಟಾದಡಿ ಲಕ್ಷ್ಮಿ ಹೆಬ್ಬಾಳ್ಕರ್ಗೂ ಸಚಿವ ಸ್ಥಾನ ಸಿಗುವ ಸಾಧ್ಯತೆ ಇದೆ. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರೋಧ ಕಟ್ಟಿಕೊಂಡು ಗೆದ್ದಿರುವ ಲಕ್ಷ್ಮಿ ಹೆಬ್ಬಾಳ್ಕರ್ಗೆ ಈ ಬಾರಿ ಸಚಿವ ಸ್ಥಾನ ಪಕ್ಕಾ ಎನ್ನಲಾಗ್ತಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಕೂಡ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.