ಮ್ಯಾನ್‌ ಹೋಲ್‌‌ಗಿಳಿದ್ರೆ ಏಡ್ಸ್ ಬರುತ್ತೆ: ಬಿಜೆಪಿ ಶಾಸಕ

ಅತಿಥಾ

ಗುರುವಾರ, 15 ಫೆಬ್ರವರಿ 2018 (19:26 IST)
ಮ್ಯಾನ್‌ಹೋಲ್ ಸ್ವಚ್ಚಗೊಳಿಸುವವರಿಗೆ ಎಚ್‌ಐವಿ ಅಥವಾ ಏಡ್ಸ್ ಬರುತ್ತದೆ ಎಂದು ಬಿಜೆಪಿ ಶಾಸಕರೊಬ್ಬರು ಹೊಸ ಸಂಶೋಧನೆ ಮಾಡಿ ಹೇಳಿಕೆ ನೀಡಿರುವುದು ಹೊಸ ಚರ್ಚೆಗೆ ಗ್ರಾಸವಾಗಿದೆ.
ಯಂತ್ರಗಳಿಂದ ಮಾತ್ರ ಮ್ಯಾನ್‌ಹೋಲ್‌ಗಳನ್ನು ಸ್ವಚ್ಚಗೊಳಿಸಬೇಕು ಎನ್ನುವ ಕಟ್ಟು ನಿಟ್ಟಿನ ಸರಕಾರಿ ಆದೇಶವಿದ್ದರೂ ಅಲ್ಲೊಂದು ಇಲ್ಲೊಂದು ಇಂತಹ ಅಮಾನವೀಯ ಘಟನೆಗಳು ವರದಿಯಾಗುತ್ತಿರುತ್ತವೆ.
 
ಮ್ಯಾನ್‌ ಹೋಲ್‌‌ಗಳನ್ನು ಸ್ವಚ್ಛಗೊಳಿಸುತ್ತಿರುವ ವ್ಯಕ್ತಿಯೊಬ್ಬನಿಗೆ ಎಚ್ಐವಿ / ಏಡ್ಸ್ ಸೋಂಕು ಅಂಟಿದೆ ಎಂದು ಬಿಜೆಪಿ ವಿಧಾನಪರಿಷತ್ ಸದಸ್ಯ ವೀರಯ್ಯಾ ಹೇಳಿಕೆ ನೀಡಿ ಆಘಾತ ಮೂಡಿಸಿದ್ದಾರೆ.
 
ಬೆಂಗಳೂರಿನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಹೋಟೆಲ್‌ವೊಂದರ ಮುಚ್ಚಿಹೋಗಿರುವ ಸೆಪ್ಟಿಕ್ ಟ್ಯಾಂಕ್ ಅನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಉಸಿರುಕಟ್ಟುವಿಕೆಯಿಂದ ಮರಣ ಹೊಂದಿದ್ದಾರೆ, "ಮ್ಯಾನ್‌ ಹೋಲ್‌‌ಗಳನ್ನು ಸ್ವಚ್ಛಗೊಳಿಸುವವರಿಗೆ ಏಡ್ಸ್ ಬರುತ್ತದೆ, ಪೌರ ಕಾರ್ಮಿಕರು 30-40 ವಯಸ್ಸಿಗೆ ಸಾವನ್ನಪ್ಪುತ್ತಾರೆ, ಮ್ಯಾನ್‌‌ಹೋಲ್‌ ಸ್ವಚ್ಛಗೊಳಿಸುವ ಕಾಯ್ದೆ ಬಲಪಡಿಸಬೇಕು, ಹೊಸ ಕಾಯ್ದೆಯನ್ನೇ ರೂಪಿಸಿದರೂ ತಪ್ಪಿಲ್ಲ" ಎಂದು ಹೇಳಿದ್ದಾರೆ.
 
ಕೂಲಿ ಪೌರಕಾರ್ಮಿಕರ ಸಾವುಗಳನ್ನು ಖಂಡಿಸಿ ಬೆಂಗಳೂರಿನಲ್ಲಿ ಗುರುವಾರ ಬಿಜೆಪಿಯ ಸ್ಲಂ ಮೋರ್ಚಾ ಮತ್ತು ಎಸ್ಸಿ ಮೋರ್ಚಾ ಪ್ರತಿಭಟನೆ ನಡೆಯಲಿದೆ ಎಂದು ವೀರಯ್ಯ ಹೇಳಿದ್ದಾರೆ. 
 
ಜೋತೆಗೆ ರಾಮ್ ಮತ್ತು ರವಿ ಇಬ್ಬರು ಕೆಲಸಗಾರರನ್ನು ನೇಮಕ ಮಾಡಿಕೊಂಡ ಹೋಟೆಲ್ ಯುಮ್ಲೋಕ್ ಮಾಲೀಕರು ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಹ ಅವರು ಒತ್ತಾಯಿಸಿದರು.
 
ಸಂತ್ರಸ್ತರ ಮಕ್ಕಳಿಗೆ ಶಾಶ್ವತ ಉದ್ಯೋಗಗಳು ಮತ್ತು 10 ಲಕ್ಷ ರೂ. ಪರಿಹಾರವನ್ನು ಸರ್ಕಾರ ನೀಡಬೇಕು ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ