ಭಂಡ ಬಾಳು ಬಿಟ್ಟು ರಾಜೀನಾಮೆ ನೀಡಿ: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅಶೋಕ್ ವಾಗ್ದಾಳಿ

Sampriya

ಗುರುವಾರ, 3 ಜುಲೈ 2025 (15:21 IST)
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಡೆಯಿಂದ ಒಬ್ಬ ಕರ್ತವ್ಯನಿಷ್ಠ ಅಧಿಕಾರಿಯ ಸ್ವಾಭಿಮಾನಕ್ಕೆ ಧಕ್ಕೆ ಬಂದಿದೆ. ಇಡೀ ಪೊಲೀಸ್ ಇಲಾಖೆಯ ಮನೋಬಲಕ್ಕೆ ಚ್ಯುತಿ ತಂದಿದೆ. ಅಧಿಕಾರಶಾಹಿಯ ನೈತಿಕತೆಗೆ ಪೆಟ್ಟು ಕೊಟ್ಟಿದೆ, ನೌಕರಶಾಹಿಯ ಆತ್ಮಸ್ಥೈರ್ಯ ಕುಸಿದಿದೆ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಟೀಕಿಸಿದ್ದಾರೆ.

ಬೆಳಗಾವಿಯಲ್ಲಿ ಈಚೆಗೆ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಅವಮಾನಕ್ಕೀಡಾದ ಧಾರವಾಡ ಎಎಸ್‍ಪಿ ನಾರಾಯಣ ಭರಮನಿ ಸ್ವಯಂ ನಿವೃತ್ತಿಯಾಗಲು ಮುಂದಾಗಿದ್ದಾರೆ. ಈ ವಿಚಾರವನ್ನು ಉಲ್ಲೇಖಿಸಿ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಈ ಸರ್ಕಾರದಿಂದ ಪೊಲೀಸ್ ಇಲಾಖೆಯ ಮನೋಬಲಕ್ಕೆ ಧಕ್ಕೆಯಾಗಿದೆ. ಸಿಎಂ ಸಿದ್ದರಾಮಯ್ಯನವರೇ ಹೆಚ್ಚುವರಿ ಎಸ್ಪಿ ನಾರಾಯಣ ಭರಮನಿ ಅವರ ಮೇಲೆ ನೀವು ಬಹಿರಂಗ ವೇದಿಕೆಯ ಮೇಲೆ ಕೈ ಎತ್ತಿದ್ದ ಘಟನೆಗೆ ಕಾರಣ ನಿಮ್ಮ ಅಧಿಕಾರದ ದರ್ಪವೋ, ಮದವೋ, ದುರಹಂಕಾರವೋ, ವಿಫಲ ಸರಕಾರ ಮುನ್ನಡೆಸುತ್ತಿರುವ ಹತಾಶೆಯೋ, ಅಥವಾ ಇಷ್ಟರಲ್ಲೇ ಅಧಿಕಾರ ಬಿಟ್ಟುಕೊಡಬೇಕು ಎನ್ನುವ ಕಾತಾಳವೋ, ಅದನ್ನು ನಿಮ್ಮ ಆತ್ಮಾವಲೋಕನಕ್ಕೆ ಬಿಡುತ್ತೇನೆ ಎಂದು ಅಶೋಕ್‌ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ. 

ಸಿದ್ದರಾಮಯ್ಯ ಅವರ ಯಡವಟ್ಟುಗಳಿಂದ ಪ್ರತಿ ದಿನ ಒಂದಲ್ಲ ಒಂದು ಒಂದು ರೀತಿ ಸರ್ಕಾರಕ್ಕೆ, ವೈಯಕ್ತಿಕವಾಗಿ ಅವರಿಗೆ ಕೆಟ್ಟ ಹೆಸರು ಬರುತ್ತಲೇ ಇದೆ. ಇನ್ನಾದರೂ ಈ ಭಂಡ ಬಾಳು ಬಿಡಿ. ಅಧಿಕಾರದ ವ್ಯಾಮೋಹ ಬಿಟ್ಟು ರಾಜೀನಾಮೆ ಕೊಟ್ಟು ಇರುವ ಅಲ್ಪ ಸ್ವಲ್ಪ ಗೌರವವನ್ನಾದರೂ ಉಳಿಸಿಕೊಳ್ಳಿ ಎಂದು ಒತ್ತಾಯಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ