'ರಾಜಕೀಯ ನರಮೇಧʼಕ್ಕೆ ಯಾರು ಕಾರಣವೆಂದು ಜನರಿಗೆ ಗೊತ್ತಾಗಲಿ: ಎಚ್ ಡಿಕೆ
ಶನಿವಾರ, 16 ಅಕ್ಟೋಬರ್ 2021 (10:09 IST)
ಬೆಂಗಳೂರು : ಅಲ್ಪಸಂಖ್ಯಾತರ ಕಲ್ಯಾಣದ ಪೇಟೆಂಟ್ ತೆಗೆದುಕೊಂಡಂತೆ ಪೋಸು ಕೊಡುವ ʼಸಿದ್ದಹಸ್ತʼ ಶೂರನ ನಿಜಬಣ್ಣ ಬಯಲು ಮಾಡುವ ಸಂದರ್ಭ ಬಂದಿದೆ.
ಸ್ವಾರ್ಥ, ಸ್ವಜನ ಪಕ್ಷಪಾತ, ತಮ್ಮ ಬೆಂಬಲಿಗರ ರಾಜಕೀಯ ಅಭಿವೃದ್ಧಿಗಾಗಿ ಪಕ್ಷಕ್ಕಾಗಿ ಅಹರ್ನಿಷಿ ದುಡಿದ ಅಲ್ಪಸಂಖ್ಯಾತ ನಾಯಕರನ್ನು ಗುರಿ ಇಟ್ಟು ಮುಗಿಸಲಾಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಎಚ್ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ತನ್ನೆಲ್ಲ ಸಿದ್ದಕಲೆ, ಸಿದ್ದಸೂತ್ರಗಳೆನ್ನೆಲ್ಲ ಪೋಣಿಸಿ ʼಅಹಿಂದʼ ಎಂದು ಜನರನ್ನು ಅಡ್ಡದಾರಿ ಹಿಡಿಸಿದ ʼಸಿದ್ದಹಸ್ತ ಶೂರರುʼ ತಮ್ಮ ಸ್ವಪಕ್ಷದಲ್ಲೇ ಮುಸ್ಲೀಂ ನಾಯಕರನ್ನು ಒಬ್ಬೊಬ್ಬರನ್ನಾಗಿಯೇ ಟಾರ್ಗೆಟ್ ಮಾಡುತ್ತಾ ʼಅಲ್ಪಸಂಖ್ಯಾತರ ಅಂತ್ಯ ರಾಜಕಾರಣʼದ ಟರ್ಮಿನೇಟರ್ ಆಗಿ ಹೊರಹೊಮ್ಮಿದ್ದಾರೆ. ನಂಬಿ ಅಧಿಕಾರ ಕೊಟ್ಟ ಪಕ್ಷದ ಕತ್ತನ್ನೇ ಕುಯ್ಯುವ, ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುವ ʼಸಿದ್ದಹಸ್ತ ಸೂತ್ರಧಾರಿʼಯ ಒಳ ರಾಜಕೀಯಕ್ಕೆ ಬಲಿಯಾಗುತ್ತಿರುವ ಅಲ್ಪಸಂಖ್ಯಾತ ನಾಯಕರ ದೊಡ್ಡ ಪಟ್ಟಿಯೇ ಇದೆ. ಕಾಂಗ್ರೆಸ್ʼನಲ್ಲಿ ನಡೆದಿರುವ ಅಲ್ಪಸಂಖ್ಯಾತ ನಾಯಕರ ʼರಾಜಕೀಯ ನರಮೇಧʼಕ್ಕೆ ಯಾರು ಕಾರಣ ಎಂದು ಜನರಿಗೆ ಗೊತ್ತಾಗಲಿ ಎಂದಿದ್ದಾರೆ.
2012ರ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿ ಇಕ್ಬಾಲ್ ಅಹಮದ್ ಸರಡಗಿ ಸೋಲುತ್ತಾರೆ. ಪಕ್ಷೇತರ ಅಭ್ಯರ್ಥಿಯಾಗಿದ್ದ ಭೈರತಿ ಸುರೇಶ್ ತಮ್ಮ ಗೆಲುವಿಗೆ ಬೇಕಿದ್ದ 19 ಮತ ಮೀರಿ 23 ಮತ ಪಡೆದು ಗೆಲ್ಲುತ್ತಾರೆ! ಇಲ್ಲಿ ಸರಡಗಿ ಸೋಲಿಗೆ, ಬೈರತಿ ಸುರೇಶ್ ಗೆಲುವಿಗೆ ಕಾರಣವಾದ ʼಸಿದ್ದಸೂತ್ರʼ ಹಣೆದಿದ್ದು ಯಾರು? ಈ ʼಸಿದ್ದಹಸ್ತರ ಸಿದ್ದಸೂತ್ರʼ ಅಲ್ಲಿಗೇ ನಿಲ್ಲುವುದಿಲ್ಲ. 2016ರಲ್ಲಿ ಹೆಬ್ಬಾಳ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹಿರಿಯ ನಾಯಕ ಸಿ.ಕೆ.ಜಾಫರ್ ಷರೀಫ್ ಮೊಮ್ಮಗ ರೆಹಮಾನ್ ಷರೀಫ್ ಅವರಿಗೆ ಅಧಿಕೃತ ಟಿಕೆಟ್ ಕೊಡುತ್ತದೆ. ಆಗ ಭೈರತಿ ಸುರೇಶ್ ಪರ ಲಾಬಿ ಮಾಡಿದ್ದ ಸಿದ್ಧಕಲೆ ಸೂತ್ರಧಾರರು, ಅವರನ್ನೇ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಸಿ ಒಳಸುಳಿ ಸೃಷ್ಟಿಸಿ ಷರೀಫರ ಮೊಮ್ಮಗನನ್ನು ಸೋಲಿಸುತ್ತಾರೆ! 2023ರ ಚುನಾವಣೆಯಲ್ಲಿ ಭೈರತಿ ಸುರೇಶ್ʼಗೇ ಹೆಬ್ಬಾಳದ ಕಾಂಗ್ರೆಸ್ ಟಿಕೆಟ್ ಗ್ಯಾರಂಟಿ. ಹಾಗಾದರೆ ಜಾಫರ್ ಷರೀಫರ ಮೊಮ್ಮಗನ ಕಥೆ ಏನು? ಎಂದು ಎಚ್ ಡಿಕೆ ಪ್ರಶ್ನಿಸಿದ್ದಾರೆ.