ಮಲ್ಲಿಕಾರ್ಜುನ ಖರ್ಗೆ ಮಂಗನಂತೆ ಕ್ಷೇತ್ರ ಬದಲಾವಣೆ: ಪ್ರತಾಪ್ ಸಿಂಹ್ ಲೇವಡಿ

ಶನಿವಾರ, 31 ಡಿಸೆಂಬರ್ 2016 (14:04 IST)
ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮಂಗನಂತೆ ಕ್ಷೇತ್ರ ಬದಲಾವಣೆ ಮಾಡಿದ್ದಾರೆ. ಗಾಂಧಿ ಕುಟುಂಬಕ್ಕೆ ದಾಸರಾಗಿರುವ ಖರ್ಗೆ, ತಮ್ಮ ಮಗನಿಗೆ ಹೆಂಗಸರ ಹೆಸರನ್ನಿಟ್ಟಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
 
ವಿಜಯಪುರದಲ್ಲಿ 'ನೋಟು ಬದಲು, ದೇಶ ಮೊದಲು' ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಧರ್ಮಸಿಂಗ್ ಅವರಿಗೆ ನಡೆಯಲು ಸಾಧ್ಯವಾಗದಿದ್ದರೂ ರಾಜಕೀಯ ಆಸೆ ಮಾತ್ರ ಕಡಿಮೆ ಆಗಿಲ್ಲ. ಇನ್ನೂ ತಮ್ಮ ಆಪ್ತರ ಮೇಲೆ ಐಟಿ ದಾಳಿ ನಡೆದ ಮೇಲಂತೂ ಹೊಸ ನೋಟು ಸಿಗುತ್ತಿಲ್ಲ ಎಂದು ಆರೋಪಿಸುತ್ತಿದ್ದ ಸಿಎಂ ಸಿದ್ದರಾಮಯ್ಯ ತಮ್ಮ ಆರೋಪಗಳನ್ನು ಕೈಬಿಟ್ಟಿದ್ದಾರೆ ಎಂದು ಲೇವಡಿ ಮಾಡಿದರು.
 
ನೋಟು ನಿಷೇಧ ನಿರ್ಧಾರವನ್ನು ದೇಶದ ಜನತೆ ಸ್ವಾಗತಿಸಿದ್ದಾರೆ. ಕಳೆದ 50 ದಿನಗಳಲ್ಲಿ ಯಾವುದೇ ಗಲಾಟೆ ಸಂಭವಿಸದಿರುವುದೇ ಇದಕ್ಕೆ ಸಾಕ್ಷಿ ಎಂದು ಅಭಿಪ್ರಾಯಪಟ್ಟರು. 
 
ಲೋಕಸಭೆಯಲ್ಲಿ ನೋಟು ನಿಷೇಧ ನಿರ್ಧಾರವನ್ನು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರೋಧಿಸಿದ್ದರು. ಆದರೆ, ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಒಂದೂವರೆ ತಿಂಗಳ ಹಿಂದೆ ಬ್ಯಾಂಕ್‌ನಿಂದ ನಾಲ್ಕು ಸಾವಿರ ರೂಪಾಯಿ ಪಡೆದುಕೊಂಡು ಹೋದವರು ಮತ್ತೆ ಬ್ಯಾಂಕ್‌ನತ್ತ ಸುಳಿದಿಲ್ಲ. ಮಹಾತ್ಮಾ ಗಾಂಧಿ ಅವರಿಗಿಂತಲೂ ರಾಹುಲ್ ಗಾಂಧಿ ಸರಳ ವ್ಯಕ್ತಿ ಎಂದು ಸಂಸದ ಪ್ರತಾಪ್ ಸಿಂಹ ವ್ಯಂಗ್ಯವಾಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ