ಕೊರೊನಾ ನಿಯಂತ್ರಣಕ್ಕಾಗಿ ಜಾರಿಯಾಗಿರುವ ಲಾಕ್ ಡೌನ್ ನಿಂದ ಹುಬ್ಬಳ್ಳಿ ಶಹರ ಹೊರತುಪಡಿಸಿ ಜಿಲ್ಲೆಯಾದ್ಯಂತ ಈಗಾಗಲೇ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿವೆ.
ಸೋಮವಾರ ಮೇ 11 ರಿಂದ ಹುಬ್ಬಳ್ಳಿಯ ಸೀಲ್ ಡೌನ್ ಪ್ರದೇಶ ಹೊರತುಪಡಿಸಿ ಉಳಿದೆಡೆ ವಾಣಿಜ್ಯ, ವಹಿವಾಟುಗಳನ್ನು ನಡೆಸಲು ಅವಕಾಶ ಕಲ್ಪಿಸಲು ಆದೇಶ ಹೊರಡಿಸಲಾಗುವುದು ಎಂದು ಬೃಹತ್ , ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ ಶೆಟ್ಟರ್ ಹೇಳಿದ್ದಾರೆ.
ಅಂಗಡಿ ಮತ್ತು ಮುಂಗಟ್ಟುಗಳ ಕಾಯ್ದೆ ಪ್ರಕಾರ ಸ್ಥಾಪನೆಯಾಗಿರುವ ಎಲ್ಲಾ ಅಗತ್ಯ ವಸ್ತುಗಳ ಪೂರೈಕೆಯ ವಾಣಿಜ್ಯ, ವಹಿವಾಟುಗಳು ಈಗಾಗಲೇ ಜಿಲ್ಲೆಯ ಧಾರವಾಡ, ಕಲಘಟಗಿ, ಅಳ್ನಾವರ, ಕುಂದಗೋಳ, ಅಣ್ಣಿಗೇರಿ ಹಾಗೂ ನವಲಗುಂದ ತಾಲ್ಲೂಕುಗಳಲ್ಲಿ ಪುನರಾರಂಭವಾಗಿವೆ.
ಹುಬ್ಬಳ್ಳಿಯ ಸೀಲ್ ಡೌನ್ ಪ್ರದೇಶ ಹೊರತುಪಡಿಸಿ ಉಳಿದ ಎಲ್ಲಾ ಕಡೆಗಳಲ್ಲೂ ಕಿರಾಣಿ ಅಂಗಡಿ, ಹೊಟೆಲ್ ಗಳಲ್ಲಿ ಪಾರ್ಸೆಲ್ ಸೇರಿದಂತೆ ವಿವಿಧ ವ್ಯಾಪಾರ ಚಟುವಟಿಕೆಗಳ ಪ್ರಾರಂಭಕ್ಕೆ ವಾರದ ಎಲ್ಲಾ ದಿನಗಳಲ್ಲಿಯೂ ಅವಕಾಶ ಕಲ್ಪಿಸಿ ಸಮರ್ಪಕ ಆದೇಶ ಹೊರಡಿಸಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದಾರೆ.